ಅಂಕೋಲಾ-ಯಲ್ಲಾಪುರ ಗಡಿ ಗ್ರಾಮವಾದ ಹಳವಳ್ಳಿಯಲ್ಲಿ ಊರಿನವರೆಲ್ಲ ಒಟ್ಟಾಗಿ ಜನವರಿ 26ರಂದು `ಆಲೆಮನೆ ಉತ್ಸವ’ ಆಯೋಜಿಸುತ್ತಿದ್ದಾರೆ. ಸಂಜೆ 6 ಗಂಟೆಯಿoದ ರಾತ್ರಿ 10ಗಂಟೆಯವರೆಗೆ ಈ ಉತ್ಸವ ನಡೆಯಲಿದೆ.
ಕಳೆದ ವರ್ಷವೂ ಇಲ್ಲಿ ಆಲೆಮನೆ ಉತ್ಸವವನ್ನು ಆಯೋಜಿಸಲಾಗಿತ್ತು. ಅದು ಯಶಸ್ವಿಯಾದ ಹಿನ್ನಲೆ ಇದೀಗ 2ನೇ ಬಾರಿ ಹಬ್ಬ ಆಚರಿಸಲಾಗುತ್ತಿದೆ. ಸುತ್ತಲಿನ ಹಲವು ಪ್ರದೇಶದವರನ್ನು ಸೇರಿ ಜನವರಿ 26ರ ಸಂಜೆ ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆಯಿದೆ.
ಹಳ್ಳವಳಿಯ ಸಿದ್ದಿ ವಿನಾಯಕ ಹವ್ಯಕ ಟ್ರಸ್ಟ್, ಕಿರಣ ಯುವಕ ಮಂಡಳ ಹಾಗೂ ಆಶಾ ಯುವತಿ ಮಂಡಳದವರು ಒಟ್ಟಾಗಿ ಈ ಆಲೆಮನೆ ಹಬ್ಬವನ್ನು ಸಂಯೋಜಿಸಿದ್ದಾರೆ. ಊರಿನ ಯುವಕ-ಯುವತಿಯರೆಲ್ಲರೂ ಸೇರಿ ಸಾಧನಾ ರೈತ ಸಭಾ ಭವನದಲ್ಲಿ ಕಬ್ಬಿನ ಸ್ವಾದ ಉಣಬಡಿಸುತ್ತಿದ್ದಾರೆ. ಕಬ್ಬಿನ ಹಾಲಿನ ಜೊತೆ ಮಿರ್ಚಿ-ಮಂಡಕ್ಕಿಯAಥ ತಿನಿಸುಗಳನ್ನು ಬಡಿಸಲಾಗುತ್ತದೆ. ಕಬ್ಬಿನ ಹಾಲು ಮಾರಾಟಕ್ಕೆ ಸಹ ಸಿಗುತ್ತದೆ.
ವಾಹನ ಹೊಂದಿದವರು ಹುಬ್ಬಳ್ಳಿ ಅಂಕೋಲಾ ಹೆದ್ದಾರಿಯ ರಾಮನಗುಳಿ ಹೈವೆಯಿಂದ 10 ನಿಮಿಷದ ದಾರಿಯಲ್ಲಿ ಕ್ರಮಿಸಿ ಸಾಧನಾ ಸಭಾ ಭವನ ತಲುಪಬಹುದಾಗಿದ್ದು, ರಸ್ತೆ ಸಂಪರ್ಕ ಮೊದಲಿಗಿಂತಲೂ ಸಾಕಷ್ಟು ಸುಧಾರಿಸಿದೆ. `ರೈತರಿಗೆ ಪ್ರೋತ್ಸಾಹ, ಊರಿನಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವಿಕೆ ಜೊತೆ ಬಂಧು-ಬಳಗದವರ ಜೊತೆ ಹಬ್ಬದ ವಾತಾವರಣ ಅನುಭವಿಸಲು ಆಲೆಮನೆ ಹಬ್ಬ ಸಂಘಟಿಸಲಾಗಿದೆ’ ಎಂದು ಸಂಘಟಕ ನಾರಾಯಣ ಹೆಬ್ಬಾರ್ ಹೇಳಿದರು.



