ಕರ್ನಾಟಕ ಮತ್ತು ಗೋವಾ ರಾಷ್ಟ್ರೀಯ ಹೆದ್ದಾರಿಯ ಅನಮೋಡ – ರಾಮನಗರ ಮಾರ್ಗದ ಕ್ಯಾಸರ್‌ಲಾಕ್ ರಸ್ತೆ 12 ಮೀಟರ್ ಅಗಲವಿದೆ. ಆದರೆ, 71ನೇ ಸಂಖ್ಯೆಯ ಸೇತುವೆಯನ್ನು ಮಾತ್ರ ಏಳು ಮೀಟರ್ ಅಗಲಕ್ಕೆ ನಿರ್ಮಿಸಲಾಗುತ್ತದೆ!
ಇದಲ್ಲದೇ, ಸೇತುವೆ ಪ್ರದೇಶ ತಿರುವಿನಿಂದ ಕೂಡಿದ್ದು, 6 ಮೀಟರ್ ಮಾತ್ರ ಬಳಕೆಗೆ ಸಿಗುವ ಸಾಧ್ಯತೆಗಳಿದೆ. ಈ ರಸ್ತೆ ಕಾಮಗಾರಿ ಸಹ ಆಮೆಗತಿಯಲ್ಲಿ ಸಾಗುತ್ತಿದೆ. 2017, 2021, 2023 ಮತ್ತು 2024ರಲ್ಲಿ ರಸ್ತೆ ಕಾಮಗಾರಿಗಾಗಿ ಈ ಸೇತುವೆ ಕೆಲಸ ನಿಲ್ಲಿಸಲಾಗಿದ್ದು, ಈವರೆಗೂ ಸೇತುವೆ ಪೂರ್ಣವಾಗಿಲ್ಲ. `12 ಮೀಟರ್ ರಸ್ತೆಗೆ 12 ಮೀಟರ್ ಸೇತುವೆ ನಿರ್ಮಿಸಿ ಅಪಘಾತ ಪ್ರಮಾಣ ತಡೆಯಬೇಕು’ ಎಂದು ರಾಜ್ಯ ಲಾರಿ ಮಾಲಕರ ಸಂಘದವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಇದರೊಂದಿಗೆ ಲಾರಿ ಚಾಲಕ ಹಾಗೂ ಮಾಲಕರು ಅನುಭವಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಅವರು ಚರ್ಚೆ ನಡೆಸಿದ್ದಾರೆ.
ಭಾನುವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವರ ಮನೆಯಲ್ಲಿದ್ದು, ಲಾರಿ ಮಾಲಕ ಸಂಘದ ಉಪಾಧ್ಯಕ್ಷ ಕೆ ಎಸ್ ಮಣಿ ಅವರು ಮನೆಗೆ ತೆರಳಿ ಸಂಸದರನ್ನು ಗೌರವಿಸಿದರು. ಅದಾದ ನಂತರ ಅನಮೋಡ – ರಾಮನಗರ ಮಾರ್ಗದ ಕ್ಯಾಸರ್‌ಲಾಕ್ ರಸ್ತೆಗೆ 12 ಮೀಟರ್ ಸೇತುವೆ ಮಾಡದೇ ಇದಲ್ಲಿ ಅಪಘಾತವಾಗುವ ಸಾಧ್ಯತೆಗಳಿರುವುದನ್ನು ಮನವರಿಕೆ ಮಾಡಿದರು. `ಈ ಮಾರ್ಗ ರಾ ಹೆದ್ದಾರಿ ಆಗಿರುವುದರಿಂದ ಭಾರೀ ಪ್ರಮಾಣದ ವಾಹನ ಸಂಚಾರ ನಡೆಯಲಿದೆ. 12 ಮೀಟರ್ ರಸ್ತೆಗೆ 12 ಮೀಟರ್ ಸೇತುವೆ ನಿರ್ಮಿಸಿ, ಇಲ್ಲಿ ಸಮಸ್ಯೆ ಎದುರಾಗುವ ಮುನ್ನ ಪರಿಹಾರ ಸೂಚಿಸಿ’ ಎಂದು ಮನವಿ ಮಾಡಿದರು. `ಅರೆಬರೆ ಕಾಮಗಾರಿಯನ್ನು ಸಹ ಶೀಘ್ರದಲ್ಲಿ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು. ಲಾರಿ ಚಾಲಕ ಮಾಲಕರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಅದೆಲ್ಲವನ್ನು ಬಗೆಹರಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಕೋರಿದರು.
`ಆನಮೋಡ ತಪಾಸಣಾ ಕೇಂದ್ರದ ಬಳಿ ಸಿಮೆಂಟ್ ಕಾಂಕ್ರೀಟ್ ರಸ್ತೆಯಲ್ಲೂ ಇಕ್ಕೆಲಗಳಲ್ಲಿ ಶೋಲ್ಡರಿಂಗ್ ಮಾಡಿಸಿಲ್ಲ. ಇದು ಸಹ ಅಪಘಾತಗಳಿಗೆ ಆಹ್ವಾನ ನೀಡುತ್ತದೆ’ ಎಂದು ನಿಯೋಗದಲ್ಲಿದ್ದವರು ಸಂಸದರ ಗಮನಕ್ಕೆ ತಂದರು. `ಕಾಮಗಾರಿಗಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿದರೆ ವಾಣಿಜ್ಯ ದೃಷ್ಟಿಯಿಂದ ಸಾಕಷ್ಟು ನಷ್ಟವಾಗಲಿದೆ. ಹೀಗಾಗಿ ಇಲ್ಲಿ ಬೈಪಾಸ್ ರಸ್ತೆ ನಿರ್ಮಿಸಬೇಕು. ಬೈಪಾಸ್ ಮಾಡಿದರೆ 351 ಮರ ಕಟಾವು ಮಾಡಬೇಕಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
`ಈ ಎಲ್ಲಾ ವಿಷಯಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ, ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುವೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು. ಲಾರಿ ಮಾಲಕ ಸಂಘದ ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಅಧ್ಯಕ್ಷ ಗಿರೀಶ್ ಮಲೆನಾಡು, ಕಾರವಾರ ನೊಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಮಾಧವ ನಾಯಕ, ಯಲ್ಲಾಪುರ ತಾಲೂಕು ಲಾರಿ ಮಾಲಕ ಅಧ್ಯಕ್ಷ ಸುಜಯ ಮರಾಠಿ, ಪ್ರಮುಖರಾದ ಕಿರಣ ನಾಯ್ಕ್, ಅಕ್ಷಯ್, ಮಹೇಶ ನಾಯ್ಕ ಹಾಜರಿದ್ದರು. ಖಾನಾಪುರ, ಬೆಳಗಾವಿ ಹಾಗೂ ಗೋವಾ ಸಂಘಗಳ 50ಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳು ಆಗಮಿಸಿ ತಮ್ಮ ಸಮಸ್ಯೆ ವಿವರಿಸಿದರು.
ಲಾರಿ ಮಾಲಕ ಸಂಘದವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಚರ್ಚಿಸಿದ ವಿಡಿಯೋ ಇಲ್ಲಿ ನೋಡಿ..