`ಸರಕು ಸಾಮಗ್ರಿ ಸಾಗಿಸುವ ವಾಹನದಲ್ಲಿ ಪ್ರಯಾಣಿಕರ ಸಾಗಾಟ ನಡೆಯುತ್ತಿದ್ದು, ಇದನ್ನು ಕಡ್ಡಾಯವಾಗಿ ತಡೆಯಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
`ರಾಜ್ಯದ ಹಲವು ಕಡೆ ಸರಕು ಸಾಗಿಸುವ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಈಚೆಗೆ ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಸಹ ತರಕಾರಿ ವಾಹನ ಪಲ್ಟಿಯಾಗಿದ್ದು, ಆ ಲಾರಿಯಲ್ಲಿದ್ದ 10 ಜನ ಸಾವನಪ್ಪಿದ್ದಾರೆ. 30ಕ್ಕೂ ಅಧಿಕ ಪ್ರಯಾಣಿಕರನ್ನು ಸರಕು ಸಾಗಿಸುವ ವಾಹನದಲ್ಲಿ ಕರೆದೊಯ್ಯುತ್ತಿರುವುದು ದೊಡ್ಡ ಅಪರಾಧ’ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.
`ಅತಿಯಾದ ವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಓಡಿಸುವಿಕೆ, ನಿಗಧಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಬಾರದೊಂದಿಗೆ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ರಿಕ್ಷಾಗಳಲ್ಲಿ ಸಹ ಶಾಲಾ ಮಕ್ಕಳನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಕರೆದೊಯ್ಯುತ್ತಿದ್ದು, ಅದನ್ನು ತಡೆಯಬೇಕು. ಪ್ರಯಾಣಿಕರನ್ನು ಕರೆದೊಯ್ಯುವ ಸರಕು ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಬಗ್ಗೆ ರಾಜ್ಯದ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದವರು ಆಗ್ರಹಿಸಿದ್ದಾರೆ.
ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದವರು ಕುಮಟಾ ಪೊಲೀಸ್ ಠಾಣೆಯ ಎಎಸ್‌ಐ ಮಾರುತಿ ಅವರ ಮೂಲಕ ಸರ್ಕಾರಕ್ಕೆ ಈ ಮನವಿ ರವಾನಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಿವೃತ್ತ ಅಧಿಕಾರಿ ನಾಗೇಶ್ ಹುಲಸ್ವಾರ, ಪ್ರಮುಖರಾದ ರತ್ನಾಕರ ವಿ ಭಟ್ ಹಾಗೂ ಇಮಾಮ್ ಸಾಬ್ ಇದ್ದರು.