ಮಾಹಿತಿ ಹಕ್ಕು ಕಾಯ್ದೆ ಅಡಿ ನ್ಯಾಯವಾದಿಯೊಬ್ಬರು ಸಲ್ಲಿಸಿದ ಅರ್ಜಿಗೆ ಮಹಿಳಾ ನೌಕರರೊಬ್ಬರು ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ಸಿಟ್ಟಾದ ನ್ಯಾಯವಾದಿ ಸರ್ಕಾರಿ ಕರ್ತವ್ಯದಲ್ಲಿರುವ ಮಹಿಳೆಯನ್ನು ನಾಯಿಗೆ ಹೋಲಿಸಿ ನಿಂದಿಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ನ್ಯಾಯವಾದಿಯನ್ನು ಹಗ್ಗಾಮುಗ್ಗ ತರಾಠೆಗೆ ತೆಗೆದುಕೊಂಡಿದ್ದಾರೆ.
ಕಾರವಾರ ನಂದನಗದ್ದಾದ ನ್ಯಾಯವಾದಿ ಗಿರೀಶ ನಾಯ್ಕ ಅವರು ಕುಮಟಾ ತಹಶೀಲ್ದಾರ್ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ವಿಳಾಸ ಸರಿಯಿಲ್ಲದ ಕಾರಣ ಅವರಿಗೆ ನೀಡಿದ ಹಿಂಬರಹ ಮರಳಿ ತಹಶೀಲ್ದಾರ್ ಕಚೇರಿಗೆ ಮರಳಿತ್ತು. ಈ ವಿಷಯವಾಗಿ ಮಾತನಾಡಲು ಗಿರೀಶ ನಾಯ್ಕ ಅವರು ಜನವರಿ 24ರ ಮಧ್ಯಾಹ್ನ ತಹಶೀಲ್ದಾರ್ ಕಚೇರಿಗೆ ಬಂದಿದ್ದರು. ಅಲ್ಲಿನ ಪ್ರಥಮ ದರ್ಜೆ ಸಹಾಯಕಿ ಮಧುರಾ ನಾಯ್ಕ ಅವರನ್ನು ಈ ಬಗ್ಗೆ ವಿಚಾರಿಸಿದ್ದರು. `ತಮಗೆ ರವಾನಿಸಿದ ಪತ್ರ ಮರಳಿ ಬಂದಿದೆ’ ಎಂದು ತಿಳಿಸಿದ ಮಧುರಾ ನಾಯ್ಕ ಅವರು ಕಳುಹಿಸಲಾದ ದಾಖಲೆಗಳನ್ನು ಕಾಣಿಸಿದರು.
ಗಿರೀಶ ನಾಯ್ಕ ಅವರು ಬಯಸಿದ ಕಡತ ಕಂದಾಯ ನಿರೀಕ್ಷಕರ ಬಳಿಯಿದ್ದು, ಮಾಹಿತಿ ಹಕ್ಕು ಅಧಿಕಾರಿಗಳು ಹಿಂಬರಹದಲ್ಲಿ ಅದನ್ನು ಉಲ್ಲೇಖಿಸಿದ್ದರು. ಇದನ್ನು ನೋಡಿ ಸಿಟ್ಟಾದ ಗಿರೀಶ ನಾಯ್ಕ ಏಕಾಏಕಿ ಆ ನೌಕರರ ಮೇಲೆ ಕೂಗಾಡಿದರು. `ಅರ್ಜಿಯನ್ನು ಸರಿಯಾಗಿ ಓದಲು ಬರುವುದಿಲ್ಲವಾ?’ ಎಂದು ಪ್ರಶ್ನಿಸಿದರು. `ದುಡ್ಡು ಕೊಟ್ಟು ಕೆಲಸಕ್ಕೆ ಬಂದಿದ್ದೀಯಾ? ನಿನಗೆ ಇಲ್ಲಿ ಕೆಲಸ ಕೊಟ್ಟವರು ಯಾರು?’ ಎಂದು ಏಕವಚನದಲ್ಲಿ ಕೂಗಾಡಿದರು. ಇದಲ್ಲದೇ, ಹಲವು ಬಾರಿ ಆ ಮಹಿಳಾ ನೌಕರರನ್ನು ಉದ್ದೇಶಿಸಿ `ನೀನು ನಾಯಿ’ ಎಂದು ನಿಂದಿಸಿದರು. ಈ ವೇಳೆ ಅಲ್ಲಿದ್ದ ಸಾರ್ವಜನಿಕರು ವಕೀಲರನ್ನು ಬೈದು `ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಬಳಿ ಚರ್ಚಿಸಿ’ ಎಂದು ಸಲಹೆ ನೀಡಿದರು. ಆಗ ಸಾರ್ವಜನಿಕರ ಜೊತೆಯೂ ವಕೀಲರು ಕೂಗಾಡಿದರು. ಇದಕ್ಕೆ ಅಲ್ಲಿ ನೆರೆದಿದ್ದವರು ಸಹ ಆಕ್ಷೇಪವ್ಯಕ್ತಪಡಿಸಿದರು.
ನೌಕರರ ಸಂಘದಿoದ ಖಂಡನೆ
ಒಬ್ಬ ನ್ಯಾಯವಾದಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಗಿರೀಶ ನಾಯ್ಕ ಮಹಿಳಾ ನೌಕರರ ಜೊತೆ ಅಸಭ್ಯವಾಗಿ ವರ್ತಿಸಿರುವುದನ್ನು ರಾಜ್ಯ ಸರ್ಕಾರಿ ಕಂದಾಯ ನೌಕರರ ಸಂಘ ಖಂಡಿಸಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಂಘ ಪತ್ರ ಬರೆದಿದೆ.

ಮಹಿಳಾ ಸಿಬ್ಬಂದಿಗೆ ಸಾರ್ವಜನಿಕರ ಎದುರು ಕೆಟ್ಟದಾಗಿ ನಿಂದಿಸಿದ ನ್ಯಾಯವಾದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ ಹಾಗೂ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಟಿ ಎಸ್ ಗಾಣಿಗೇರ ಜೊತೆ ಹಲವು ಸಿಬ್ಬಂದಿ ಸೇರಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.
ಪೊಲೀಸ್ ದೂರು ನೀಡಲು ಹಿಂದೇಟು
ನ್ಯಾಯವಾದಿ ಗಿರೀಶ ನಾಯ್ಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ಕಂದಾಯ ನೌಕರರ ಸಂಘ ಆರೋಪಿಸಿದೆ. ಆದರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಮಧುರಾ ನಾಯ್ಕ ಅವರು ಪೊಲೀಸ್ ದೂರು ನೀಡಿಲ್ಲ. ಪೊಲೀಸ್ ದೂರು ನೀಡಿದಲ್ಲಿ ಈ ಪ್ರಕರಣ ರಾಜ್ಯದ ಎಲ್ಲಡೆ ಸುದ್ದಿಯಾಗುತ್ತದೆ. ಸರ್ಕಾರಿ ನೌಕರರ ಸಂಘದಿAದ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಬರುತ್ತದೆ. ಜೊತೆಗೆ ಮಹಿಳಾ ನೌಕರರು ಅನಗತ್ಯವಾಗಿ ಕೋರ್ಟು-ಕಚೇರಿ ಅಲೆದಾಡಬೇಕಾಗುತ್ತದೆ. ಈ ಹಿನ್ನಲೆ ಪೊಲೀಸ್ ದೂರು ನೀಡಲು ಹಿಂದೇಟು ಹಾಕಿರುವ ಸಾಧ್ಯತೆಗಳು ಹೆಚ್ಚಿದೆ.
ಮತ್ತೆ ಮರುಕಳಿಸಿದ ನೌಕರರ ಮೇಲಿನ ದಬ್ಬಾಳಿಕೆ
ಮೊನ್ನೆ ಮೊನ್ನೆಯಷ್ಟೇ ಕುಮಟಾದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಕೆಲವರು ದಾಳಿ ನಡೆಸಿದ್ದರು. ಅಕ್ರಮ ಮರಳುಗಾರಿಕೆ ತಡೆಯಲು ತೆರಳಿದ್ದ ನೌಕರರನ್ನು ದಬಾಯಿಸಿ ಅವರ ಸುತ್ತ ದಿಗ್ಬಂಧನ ವಿಧಿಸಿದ್ದರು. ಅದರ ಬೆನ್ನಲ್ಲೇ ಇದೀಗ ಮಹಿಳಾ ನೌಕರರೊಬ್ಬರನ್ನು ಹೀನಾಯವಾಗಿ ನಿಂದಿಸಲಾಗಿದೆ.