20 ದಿನಗಳ ಹಿಂದೆ ಕೆಲಸ ಕೇಳಿಕೊಂಡು ಬಂದಿದ್ದ ರಾಜೇಶ ನಾಯ್ಕ ಎಂಬಾತರು ಸಂದೀಪ ನಾಯ್ಕ ಒಡೆತನದಲ್ಲಿರುವ ಲಾರಿಯನ್ನು ಕದ್ದು ಪರಾರಿಯಾಗಿದ್ದಾರೆ. ಲಾರಿಯ ಜೊತೆ 50 ಸಾವಿರ ರೂ ಹಣವನ್ನು ಸಹ ರಾಜೇಶ ನಾಯ್ಕ ಎಗರಿಸಿದ್ದಾರೆ.
ಅಂಕೋಲಾ ತಾಲೂಕಿನ ಅವರ್ಸಾದ ಕಿರಣ ನಾಯ್ಕ ಅವರು ಭೂದೇವಿ ಟ್ರಾನ್ಸಪೋರ್ಟ ಎಂಬ ಹೆಸರಿನಲ್ಲಿ ಟ್ರಾನ್ಸಪೋರ್ಟ ವ್ಯವಹಾರ ನಡೆಸುತ್ತಾರೆ. ಅವರು ಅವರ್ಸಾದ ಸಂದೀಪ ನಾಯ್ಕ ಅವರ ಭಾರತ್ ಬೆಂಜ್ ಲಾರಿಗೆ ಕುಮಟಾ ದಿವಗಿಯ ರಾಜೇಶ ನಾಯ್ಕ ಅವರನ್ನು ಚಾಲಕರನ್ನಾಗಿ ನೇಮಿಸಿದ್ದರು. ಅದರ ಪ್ರಕಾರ ಭಾರತ್ ಬೆಂಜ್ ಲಾರಿಯನ್ನು ಚಾಲಕನಿಗೆ ನೀಡಿ ಬಾಡಿಗೆಗೆ ಕಳುಹಿಸಿದ್ದರು.
ಜನವರಿ 20ರಂದು ಅವರ್ಸಾದಿಂದ ಮಂಗಳೂರಿಗೆ ಹೊರಟ ಲಾರಿ ಮಂಗಳೂರಿನಿAದ ಕೋಕ್ ತುಂಬಿಕೊoಡು ಗೋವಾದ ಕುಕ್ಕೊಳ್ಳಿಯಲ್ಲಿ ಇಳಿಸಿತು. ಅದಾದ ನಂತರ ಗೋವಾದಿಂದ ಸ್ಟೀಲ್ ರಾಡ್ ಹೇರಿಕೊಂಡು ಹೋಗಿ ಹುಬ್ಬಳಿಗೆ ಮುಟ್ಟಿಸಿತು. ಅಲ್ಲಿಂದ ಮುಂದೆ ಲಾರಿ ಮಾಲಕರಿಗೆ ಅರಿವಿಲ್ಲದೇ ಆ ಲಾರಿಯಲ್ಲಿ ವಿವಿಧ ಸಾಮಗ್ರಿಗಳನ್ನು ತುಂಬಿದ ರಾಜೇಶ ನಾಯ್ಕ ಅದನ್ನು ಮುರುಡೇಶ್ವರದಲ್ಲಿ ಖಾಲಿ ಮಾಡಿದ್ದಾರೆ. ಅದಾದ ನಂತರ ಲಾರಿ ಬಾಡಿಗೆಯಿಂದ ದೊರೆತ 50 ಸಾವಿರ ರೂ ಹಣದೊಂದಿಗೆ ಲಾರಿಯನ್ನು ಅಪಹರಿಸಿದ್ದಾರೆ.
ಬಾಡಿಗೆಗೆ ಹೋದ ಲಾರಿ ಮರಳಿ ಬಾರದ ಬಗ್ಗೆ ಸಂದೀಪ ನಾಯ್ಕ ತಲೆಕೆಡಿಸಿಕೊಂಡಿದ್ದರು. ಚಾಲಕ ರಾಜೇಶ ನಾಯ್ಕರಿಗೆ ಪದೇ ಪದೇ ಫೋನ್ ಮಾಡುತ್ತಿದ್ದರು. ಮೊದಲು ಫೋನ್ ಸ್ವೀಕರಸಿದ ರಾಜೇಶ ನಾಯ್ಕ ನಂತರ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ಲಾರಿ ಹಾಗೂ ಕಾಸಿನ ಜೊತೆ ಪರಾರಿಯಾದ ರಾಜೇಶ ನಾಯ್ಕ ವಿರುದ್ಧ ಕಿರಣ ನಾಯ್ಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಾರಿ ಜೊತೆ ಅದರ ಚಾಲಕನ ಹುಡುಕಾಟದಲ್ಲಿದ್ದಾರೆ.