ಕಳ್ಳ ಬಂದೂಕು ಹಿಡಿದು ಊರುರು ಸುತ್ತುತ್ತಿದ್ದ ಬೇಟೆಗಾರನೊಬ್ಬನನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೊಯಿಡಾ ರಾಮಗರದ ಎಎಸ್‌ಐ ನಾಗಭೂಷಣ ಅವರು ಪೊಲೀಸ್ ಸಿಬ್ಬಂದಿ ನಾಮದೇವ ಕಂಕಾಳಿ, ಸದಾಶಿವ ಮಠಪತಿ, ರಾಮಪ್ಪ ಪರಸಪ್ಪಗೋಳ, ರಾಜು ಚಲವಾದಿ ಜೊತೆ ಸಂಚಾರ ಹೊರಟಿದ್ದರು. ಅವರು ಇಳವೆದಾಬೆಯ ವಜ್ರ ಜಲಪಾತದ ಬಳಿ ತೆರಳುತ್ತದ್ದಾಗ ಕಾಡಿನ ರಸ್ತೆಯಲ್ಲಿ ಬೈಕ್ ಓಡಾಡುವ ಸದ್ದು ಕೇಳಿಸಿತು.
ಬೈಕಿನಲ್ಲಿ ಓಡಾಡುತ್ತಿದ್ದ ರಾಜಾ ದೇಸಾಯಿ ಬೆನ್ನಿಗೆ ಬಂದೂಕು ಸಿಗಿಸಿಕೊಂಡಿದ್ದರು. ಪೊಲೀಸ್ ಜೀಪು ನೋಡಿದ ರಾಜಾ ದೇಸಾಯಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದು, ಪೊಲೀಸರು ಆತನನ್ನು ಹಿಡಿದರು. `ಈ ಬಂದುಕು ನನ್ನದಲ್ಲ. ನನ್ನ ಭಾವ ಅಮೃತ ದೇಸಾಯಿ ಅವರದ್ದು’ ಎಂದು ರಾಜಾ ದೇಸಾಯಿ ಹೇಳಿದರು.
`ಈ ಬಂದೂಕಿಗೆ ಲೈಸೆನ್ಸ್ ಇದೆಯಾ?’ ಎಂದು ಪೊಲೀಸರು ಪ್ರಶ್ನಿಸಿದರು. ಆಗ ರಾಜ ದೇಸಾಯಿ `ಇಲ್ಲ’ ಎಂದು ಹೇಳಿದರು. ಪೊಲೀಸರು ಬಂದೂಕನ್ನು ವಶಕ್ಕೆ ಪಡೆದು ಗಮನಿಸಿದಾಗ ಅದು ಮದ್ದು ತುಂಬುವ ಬಂದೂಕಾಗಿತ್ತು. ವನ್ಯಜೀವಿ ಹತ್ಯೆಗಾಗಿ ಆತ ಅಲೆದಾಡುತ್ತಿರುವ ವಿಷಯವೂ ಬೆಳಕಿಗೆ ಬಂದಿತು.
ಪೊಲೀಸ್ ಸಿಬ್ಬಂದಿ ಬಸವರಾಜ ಮಬನೂರು, ಕೃಷ್ಣಕಾಂತ ಪಾಟೀಲ, ರಾಜಪ್ಪ ದೊಡ್ಡಮನಿ, ತನೋಜ ಬೈಲೂರು, ಸಂಜೀವ ನಾಯಕ, ರಾಜು ರಾಥೋಡ, ಪಾಂಡುರ0ಗ ನಾಯಕ, ಬಾಪು ಪಾಟೀಲ ಸೇರಿ ಅಕ್ರಮ ಬಂದೂಕು ಹಿಡಿದು ಹೊರಟಿದ್ದ ರಾಜಾ ದೇಸಾಯಿಯನ್ನು ವಶಕ್ಕೆ ಪಡೆದರು. ಆ ಮೂಲಕ ವನ್ಯಜೀವಿ ಹತ್ಯೆಯನ್ನು ತಡೆದರು. ಅದಾದ ನಂತರ ಮೇಲಧಿಕಾರಿಗಳಿಗೆ ಪೊಲೀಸರು ವರದಿ ಒಪ್ಪಿಸಿದರು.



