1.18 ಕೋಟಿ ರೂ ಮೌಲ್ಯದ ವಿದೇಶಿ ಕರೆನ್ಸಿ ಜೊತೆ ವಜ್ರಗಳನ್ನು ಸಹ ಅಕ್ರಮವಾಗಿ ಸಾಗಿಸುತ್ತಿದ್ದ ಭಟ್ಕಳದ ವ್ಯಕ್ತಿಯನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಭಟ್ಕಳದ ಎ ಆರ್ ಖತೀಬ್ (45) ಎಂಬಾತ ವಿಮಾನದ ಮೂಲಕ ಮಸ್ಕತ್‌ಗೆ ವಜ್ರ ಹಾಗೂ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ಏರ್‌ಪೋರ್ಟ್ ಕಸ್ಟಮ್ಸ್ನ ಏರ್ ಇಂಟೆಲಿಜೆನ್ಸ್ ಯುನಿಟ್ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.
ಮಸ್ಕತ್’ಗೆ ತೆರಳಲು ಯತ್ನಿಸಿದ್ದ ಖತೀಬ್ ವಿಮಾನ ನಿಲ್ದಾಣದ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೆ ಒಳಪಡಲು ನಿರಾಕರಿಸಿದಾಗ ಅಧಿಕಾರಿಗಳಿಗೆ ಆತನ ಮೇಲೆ ಅನುಮಾನ ವ್ಯಕ್ತವಾಗಿದೆ. ನಿಲ್ದಾಣದ ಒಳಗೆ ಪ್ರವೇಶ ನಿರಾಕರಿಸಿದಾಗ ಆತ ತಪಾಸಣೆಗೆ ಒಳಗಾಗಿದ್ದು, ಜೊತೆಗಿದ್ದ ಬ್ಯಾಗಿನ ತಪಾಸಣೆಗೆ ಅವಕಾಶ ಕೊಡಲಿಲ್ಲ. ಇದಕ್ಕೆ ಆತ ನೀಡಿದ ಸಮಜಾಯಿಶಿ ಅಧಿಕಾರಿಗಳಿಗೆ ಸಮಾಧಾನ ತರಲಿಲ್ಲ.
ಆಗ ಆತನ ಬ್ಯಾಗನ್ನು ವಶಕ್ಕೆಪಡೆದು ತಪಾಸಣೆ ನಡೆಸಿದ್ದು, ಅದರಲ್ಲಿ ಸೌದಿ ಅರೇಬಿಯನ್ ರಿಯಾಲ್ 59,500 ಅಂದರೆ ಅಂದಾಜು 13,32,800 ರೂ ಹಣ ಸಿಕ್ಕಿತು. ಜೊತೆಗೆ 1,05,38,700 ರೂ ಮೌಲ್ಯದ ವಜ್ರಗಳು ಅದರಲ್ಲಿದ್ದವು. ಈ ಅಕ್ರಮದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಮುಂದುವರೆದಿದೆ.