ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಪ್ರಕಟಿಸಿದೆ. ಜೊತೆಗೆ 1 ಲಕ್ಷ ರೂ ದಂಡವನ್ನು ವಿಧಿಸಿದೆ.
2022ರಲ್ಲಿ ಅಂಕೋಲಾ ತಾಲೂಕಿನ ಅಗಸೂರು ಜನತಾ ಕಾಲನಿಯ ಅಜೀತ ಎಚ್ ಪೆಡ್ನೇಕರ್ (29) ಎಂಬಾತ 17 ವರ್ಷದ ಬಾಲಕಿಯ ಸ್ನೇಹ ಬೆಳೆಸಿದ್ದ. ಅಜೀತ ಪೆಡ್ನೇಕರ್ ತನಗೆ ಮದುವೆ ಆಗಿದ್ದರೂ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿದ್ದ. `ತನ್ನ ತಾಯಿಗೆ ನಿನ್ನ ಪರಿಚಯ ಮಾಡಿಕೊಡುವೆ’ ಎಂದು ನಂಬಿಸಿ ಆಕೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದ. `ಈ ವಿಷಯ ಹೊರಗೆ ಹೇಳಿದರೆ ಕೊಲೆ ಮಾಡುವೆ’ ಎಂಬ ಬೆದರಿಕೆಯನ್ನು ಒಡ್ಡಿದ್ದ.
ಅದಾಗಿಯೂ ಬಾಲಕಿ ತನಗಾದ ಅನ್ಯಾಯದ ಬಗ್ಗೆ ಮಹಿಳಾ ಪೊಲೀಸರ ಬಳಿ ಹೇಳಿಕೊಂಡಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆಗಿನ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಫೋಕ್ಸೋ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ಶಿಕ್ಷೆ ಪ್ರಕಟಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಜೈಲು ವಾಸ ಶಿಕ್ಷೆಯ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದಿಸಿದ್ದರು. ಅಂದಿನ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪ್ರಕರಣದ ಮೇಲುಸ್ತುವಾರಿ ಅಧಿಕಾರಿ ಈಗಿನ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಎಎಸ್‌ಐ ಮಹಾಬಲೇಶ್ವರ ಗಡೇರ, ಸಹಾಯಕ ಗುರುರಾಜ ನಾಯ್ಕ ಪ್ರಕರಣದ ಸಾಕ್ಷಿಯಾಗಿದ್ದರು.