ಮೊಬೈಲ್ ಅಂಗಡಿ ನಡೆಸುವ ಹೇಮಂತ ಜಗದಾಳೆ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿ ಬಿದ್ದ ಭಯಕ್ಕೆ ಹೇಮಂತ ಜಗದಾಳೆ ಮಟ್ಕಾ ಬುಕ್ಕಿ ಹೆಸರನ್ನು ಬಾಯ್ಬಿಟ್ಟಿದ್ದು, ಮಟ್ಕಾ ಬುಕ್ಕಿ ವಿನಾಯಕ ಶೇಟ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಕಿರವತ್ತಿ ಮರಾಠಾಗಲ್ಲಿಯ ಹೇಮಂತ ಜಗದಾಳೆ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಇದರೊಂದಿಗೆ ಹೆಚ್ಚಿನ ಹಣದಾಸೆಗೆ ಅವರು ಮಟ್ಕಾವನ್ನು ಆಡಿಸುತ್ತಾರೆ. ಜನವರಿ 27ರಂದು ಹೇಮಂತ ಜಗದಾಳೆ ಮದನೂರು ಕ್ರಾಸಿನ ಬಳಿ ನಿಂತು ಜನರಿಗೆ ಆಮೀಷ ಒಡ್ಡುತ್ತಿದ್ದರು.
1ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ಅವರು ಅಲ್ಲಿನವರಿಂದ 1180ರೂ ಹಣ ಸಂಗ್ರಹಿಸಿದ್ದರು. ಈ ವಿಷಯ ಅರಿತ ಪಿಎಸ್‌ಐ ಸಿದ್ದಪ್ಪ ಗುಡಿ ದಾಳಿ ನಡೆಸಿದರು. ಹಣದ ಜೊತೆ ಮಟ್ಕಾ ಸಂಖ್ಯೆ ಬರೆಯಲು ಜೊತೆಗಿರಿಸಿಕೊಂಡಿದ್ದ ಚೀಟಿ, ಪೆನ್ನನ್ನು ಅವರು ವಶಕ್ಕೆ ಪಡೆದರು.
ಆ ವೇಳೆ ಭಯಗೊಂಡ ಹೇಮಂತ ಜಗದಾಳೆ `ಈ ಹಣ ತನ್ನದಲ್ಲ. ಇದನ್ನು ಮುಂಡಗೋಡು ಹಳ್ಳೂರಿ ಓಣಿಯ ವಿನಾಯಕ ಶೇಟ್’ಗೆ ನೀಡುವೆ’ ಎಂದು ಹೇಳಿದರು. ಮಟ್ಕಾ ಬುಕ್ಕಿ ಹೆಸರು ಅರಿತ ಪೊಲೀಸರು ವಿನಾಯಕ ಶೇಟ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಮೇಲಧಿಕಾರಿಗಳಿಗೆ ವರದಿ ಒಪ್ಪಿಸಿದರು.
ಪೊಲೀಸ್ ಸಿಬ್ಬಂದಿ ರೇಣುಕಾ ಬೆಳಗಟ್ಟಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.