ಮನೆ ಕಳ್ಳತನ, ದರೋಡೆ, ಅಪಹರಣ ಪ್ರಕರಣಗಳ ಹೆಚ್ಚಳದಿಂದ ಆತಂಕಕ್ಕೆ ಒಳಗಾದ ಗಣೇಶಪುರದ ಯುವಕರು ರಾತ್ರಿ ಹೊತ್ತು ಬಡಿಗೆ ಹಿಡಿದು ಬೀದಿ ಬೀದಿ ಸುತ್ತುತ್ತಿದ್ದಾರೆ. ಈ ವಿಷಯ ಅರಿತ ಪೊಲೀಸರು `ಕಾಯುವ ಜವಾಬ್ದಾರಿ ನಮಗೆ ಕೊಡಿ’ ಎಂದು ಯುವಕರಿಗೆ ಭರವಸೆ ನೀಡಿ, ಆ ಊರಿನ ರಕ್ಷಣೆಗಾಗಿ ನಿತ್ಯ ಗಸ್ತು ತಿರುಗುತ್ತಿದ್ದಾರೆ.
ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗಣೇಶಪುರದಲ್ಲಿ ಈಚೆಗೆ ಮನೆ ಕಳ್ಳತನ ನಡೆದಿತ್ತು. ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಳ್ಳತನ ಮಾಡಿ ಪರಾರಿಯಾಗಿದ್ದನ್ನು ಊರಿನ ಜನ ನೋಡಿದ್ದರು. ಆದರೆ, ಅವರನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಆ ಕಳ್ಳರು ಮತ್ತೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಊರಿನ ಯುವಕರು ರಾತ್ರಿಯಿಡಿ ಬಡಿಗೆ ಹಿಡಿದು ಓಣಿ ಓಣಿ ತಿರುಗುತ್ತಿದ್ದರು. `ಹೀಗೆ ಬಡಿಗೆ ಹಿಡಿದು ಸಂಚರಿಸುವುದರಿAದ ಜನ ಇನ್ನಷ್ಟು ಆತಂಕಕ್ಕೆ ಒಳಗಾಗುವ ಸಾಧ್ಯತೆಯಿದ್ದು, ರಕ್ಷಣೆಯ ಜವಾಬ್ದಾರಿ ನಮಗೆ ಬಿಡಿ’ ಎಂದು ಪೊಲೀಸರು ಊರಿನವರ ಮನವೊಲೈಕೆ ಮಾಡಿದ್ದಾರೆ. ಹೀಗಾಗಿ ಪ್ರಸ್ತುತ ಪೊಲೀಸರು ಆ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಸ್ತು ತಿರುಗುತ್ತಿದ್ದಾರೆ.
`ಹಗಲಿನ ವೇಳೆ ವಿವಿಧ ಸಾಮಗ್ರಿ ಮಾರಾಟ, ಭಿಕ್ಷಾಟನೆ-ದೇಣಿಗೆ ಪಡೆಯುವ ನೆಪದಲ್ಲಿ ಊರಿಗೆ ಬರುವ ಕಳ್ಳರು ಬೀಗ ಹಾಕಿದ ಮನೆ, ಒಂಟಿ ಮಹಿಳೆಯರು ವಾಸಿಸುವ ಮನೆಗಳನ್ನು ಗುರುತಿಸುತ್ತಾರೆ. ರಾತ್ರಿ ವೇಳೆ ತಮ್ಮ ತಂಡದ ಜೊತೆ ಬಂದು ದರೋಡೆ ಮಾಡುತ್ತಾರೆ’ ಎಂದು ಊರಿನ ಹಿರಿಯೊಬ್ಬರು ಅಭಿಪ್ರಾಯ ಹಂಚಿಕೊAಡರು. `ಈಚೆಗೆ ನಡೆದ ಕಳ್ಳತನದಲ್ಲಿ ದುಷ್ಕರ್ಮಿಗಳು ಬೈಕಿನ ನಂಬರ್ ಪ್ಲೇಟ್ ಮರೆಮಾಚಿದ್ದರು. ಹೀಗಾಗಿ ಅಪರಿಚಿತ ಯಾವುದೇ ವಾಹನ ಬಂದರೂ ಅದನ್ನು ವಿಚಾರಿಸುತ್ತಿದ್ದೇವೆ’ ಎಂದು ಗ್ರಾಮದ ಫಕೀರಸ್ವಾಮಿ ಹುಲಿಯವರ ತಿಳಿಸಿದರು.
ಪೊಲೀಸರು ಇದೀಗ ಅಪರಿಚಿತ ವಾಹನಗಳ ಬಗ್ಗೆ ಕಟ್ಟುನಿಟ್ಟಾಗಿ ವಿಚಾರಿಸುತ್ತಿದ್ದಾರೆ. ವಿವಿಧ ಕಡೆ ಅಳವಡಿಸಿರುವ ಸಿಸಿ ಕ್ಯಾಮರಾ ಪರಿಶೀಲಿಸಿ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆಯನ್ನು ನಡೆಸಿದ್ದಾರೆ. ಪಿಎಸ್‌ಐ ಪರಶುರಾಮ ಮಿರ್ಚಗಿ ಅವರು ನಸುಕಿನ ವೇಳೆ ಊರಿಗೆ ಭೇಟಿ ನೀಡಿ ಅಲ್ಲಿನ ಆಗು-ಹೋಗುಗಳನ್ನು ಗಮನಿಸುತ್ತಿದ್ದಾರೆ. ಚೆಕ್ ಪೋಸ್ಟುಗಳಲ್ಲಿ ಸಹ ನಿರಂತರವಾಗಿ ತಪಾಸಣೆ ನಡೆಯುತ್ತಿದೆ.