150ಕ್ಕೂ ಅಧಿಕ ಕ್ರಿಮಿನಲ್ ಹಿನ್ನಲೆ ಹೊಂದಿದ ವ್ಯಕ್ತಿಗಳಿಗೆ ಆಶ್ರಯ ನೀಡಿದ್ದ ಜಮೀರ್ ಅಹ್ಮದ್ ದರ್ಗಾವಾಲೆ ಎಂಬಾತನ್ನು ಅಪಹರಿಸಿ 18 ಲಕ್ಷ ರೂ ಪಡೆದು ಪರಾರಿಯಾಗಿದ್ದ ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆಯ ಐಷಾರಾಮಿ ಬದುಕು ನೋಡಿದ್ದ ದುಷ್ಕರ್ಮಿಗಳು ಬೈಕಿನಲ್ಲಿ ಹೋಗುತ್ತಿದ್ದ ಅವರಿಗೆ ಕಾರು ಗುದ್ದಿ ಅಪಹರಿಸಿದ್ದರು. ನಂತರ 30 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. 18 ಲಕ್ಷ ರೂ ಹಣ ನೀಡಿದ ನಂತರ ಜಮೀರರನ್ನು ಬಿಟ್ಟು ಕಳುಹಿಸಿದ್ದರು. ಜಮೀರ್ ಸ್ನೇಹಿತ ಮೆಹಬೂಬಸಾಬ್ ನಂದಿಕಟ್ಟಿ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಹರಣಾಕಾರರ ಬೆನ್ನತ್ತಿದ್ದರು.
ಅಪಹರಣಕಾರರು ಹಾಗೂ ಪೊಲೀಸರ ನಡುವೆ ನಡೆದ ಕಾಳಗದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದರು. ದುಷ್ಕರ್ಮಿಯೊಬ್ಬರ ಕಾಲಿಗೆ ಪೊಲೀಸರು ಈ ವೇಳೆ ಗುಂಡು ಹೊಡೆದಿದ್ದರು. ಈ ಹಿಂದೆ ಅಲ್ಲಾವುದ್ಧೀನ್ ರಬ್ಜಜಲಿ, ಅಜಯ ಮಡ್ಲಿ, ಸಾಗರ ಕಲಾಲ್, ಹಸನ್ ಕಿಲ್ಲೇದಾರ್, ದಾಧಾಪಿರ್ ಬಿಜಾಪುರ, ಖ್ವಾಜಾಮೋಹಿದ್ದುನ್ ಬೀಜಾಪುರ, ಉಮೇಜುಲ್ಲಾ ಬೇಪಾರಿ, ಅಲ್ತಾಪ ಬೇಪಾರಿ, ರೆಹಮತ್ ಧಾರವಾಡ, ಅವೇಜ್ ಬೇಪಾರಿ, ಸಂಜು ನೆವಲೆ ಎಂಬಾತರನ್ನು ಬಂಧಿಸಿದ್ದರು. ಮತ್ತೆ ಇಬ್ಬರಿಗಾಗಿ ಶೋಧ ನಡೆಸುತ್ತಿದ್ದರು. ಆ ಇಬ್ಬರು ಇದೀಗ ಸಿಕ್ಕಿ ಬಿದ್ದಿದ್ದಾರೆ. ಜನವರಿ 26ರಂದು ಶಬ್ಬಿರ್ ಅಹ್ಮದ್ ಹಾಗೂ ಸಾಧೀಕ ವಾಲೇಕರ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.