`ಗೋವು ತುಂಡರಿಸಿ ಅದರ ಗರ್ಭದಲ್ಲಿದ್ದ ಕರು ಕಿತ್ತೆಸೆದ ಪ್ರಕರಣದಲ್ಲಿ ಪೊಲೀಸರು ಕಾನೂನು ಸುವ್ಯಸ್ಥೆ ಕಾಪಾಡಿದ್ದು ಅಭಿನಂದನೀಯ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ. `ದುಷ್ಟರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ದುಷ್ಕರ್ಮಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಕಾಲಿನ ಬದಲು ಅವರ ಎದೆಗೆ ಗುಂಡು ಹೊಡೆದು ಸಮಾಜದ ಸ್ವಾಸ್ಥö್ಯ ಕಾಪಾಡಬೇಕು’ ಎಂದು ಮಾಧವ ನಾಯಕ ಅಭಿಪ್ರಾಯಪಟ್ಟಿದ್ದಾರೆ.
`ಹೊನ್ನಾವರ ಬಳಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಮಾಂಸ ಕದ್ದೊಯ್ದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಾಕಷ್ಟು ಶ್ರಮಿಸಿದ್ದಾರೆ. ಅಕ್ರಮ ಜಾನುವಾರು ವಧೆಯನ್ನು ಜಾತಿ- ಧರ್ಮ ಮೀರಿ ಎಲ್ಲರೂ ಖಂಡಿಸಬೇಕು’ ಎಂದು ಅವರು ಹೇಳಿದ್ದಾರೆ. `ಆಹಾರ ಎಂಬುದು ಅವರವರ ಹಕ್ಕು. ಆದರೆ, ಗರ್ಭ ಧರಿಸಿದ ಹಸುವನ್ನು ಕದ್ದು ಅದರ ಮಾಂಸ ಭಕ್ಷಣೆ ಸರಿಯಲ್ಲ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಾಗ, ಸಾಲ್ಕೋಡ ಒಂದೇ ಗ್ರಾಮ ವ್ಯಾಪ್ತಿಯಲ್ಲಿ ವರ್ಷಕ್ಕೆ 100ರಷ್ಟು ಆಕಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಸಾಕಷ್ಟು ಮುನ್ನಚ್ಚರಿಕೆವಹಿಸಿ ಆರೋಪಿಗಳನ್ನು ಬಂಧಿಸಿದ್ದು, ಅವರ ಶ್ರಮ ಶ್ಲಾಘನೀಯ’ ಎಂದು ಮಾಧವ ನಾಯಕರು ಹೇಳಿದ್ದಾರೆ.
`ಪ್ರಕರಣದ ಸ್ಥಳ ಮಹಜರು ವೇಳೆ ಆರೋಪಿ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ದಾಳಿ ಮಾಡಿದ್ದರಿಂದ ಭಯದ ವಾತಾವರಣ ಸೃಷ್ಟಿಸಿದೆ. ಪೊಲೀಸರು ಪ್ರತಿದಾಳಿಯಾಗಿ ಆರೋಪಿಯ ಕಾಲಿಗೆ ಗುಂಡೇಟು ನೀಡಿ ಅವರ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಂಥ ಕಟುಕರಿಗೆ ಕಾಲಿನ ಬದಲು ಎದೆಗೆ ಗುಂಡೇಟು ಹೊಡೆಯಬೇಕಿತ್ತು’ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಕರಾವಳಿ ಭಾಗದಲ್ಲಿ ದನ ಕಳ್ಳ ಸಾಗಾಣಿಕೆ ಹೆಚ್ಚಾಗಿದೆ. ಈ ನಡುವೆ ತಂಜೀಮ್ ಮುಖಂಡ ಇನಾಯತ್ ಉಲ್ಲಾ ಶಾಬಂದ್ರಿ ಪೊಲೀಸರ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹ’ ಎಂದವರು ಹೇಳಿದ್ದಾರೆ.



