ಉತ್ತರ ಕನ್ನಡ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಲಕ್ಷಾಂತರ ಸಂಖ್ಯೆ ಅರಣ್ಯ ಅತಿಕ್ರಮಣದಾರರಿದ್ದು, ಅವರೆಲ್ಲರೂ ಭೂಮಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ 10 ನಗರ ಸಂಸ್ಥೆ ವ್ಯಾಪ್ತಿಯಲ್ಲಿ 8420 ಅರಣ್ಯವಾಸಿಗಳು ಮಾತ್ರ ಅರ್ಜಿ ಸಲ್ಲಿಸಿರುವ ಬಗ್ಗೆ ದಾಖಲೆಗಳಿವೆ. ಉಳಿದ ಅರ್ಜಿಗಳು ಸರ್ಕಾರದ ಮಟ್ಟದಲ್ಲಿ ಈವರೆಗೂ ದಾಖಲಾಗಿಲ್ಲ!
ಸರ್ಕಾರದ ಪ್ರಕಾರ ಶಿರಸಿ ನಗರದಲ್ಲಿ 1241, ಸಿದ್ದಾಪುರ ಪಟ್ಟಣದಲ್ಲಿ 1391, ಯಲ್ಲಾಪುರ 1750, ಮುಂಡಗೋಡ 854, ಭಟ್ಕಳ 391, ಹೊನ್ನಾವರ 519, ಕುಮಟ 414, ಅಂಕೋಲಾ 270, ಕಾರವಾರ 20, ಹಳಿಯಾಳ ಟೌನ್ ಪಂಚಾಯತ 260, ಕಾರ್ಪೋರೇಶನ ಭಾಗದಲ್ಲಿ 62 ಅರಣ್ಯ ಅತಿಕ್ರಮಣದಾರರು ಮಾತ್ರ ಇದ್ದಾರೆ. ಈ ಬಗ್ಗೆ ಭಾನುವಾರ ಕುಮಟಾದ ಹೊನ್ನಮಾವ್‌ದಲ್ಲಿ ನಗರ ಅರಣ್ಯ ಅತಿಕ್ರಮಣದಾರರೆಲ್ಲರೂ ಸೇರಿ ಗಂಭೀರ ಚರ್ಚೆ ನಡೆಸಿದರು.
ಮರದ ನೆರಳಿನಡಿ ಕುಳಿತು ಮುಂದಿನ ಹೋರಾಟದ ಬಗ್ಗೆ ಮಾತನಾಡಿಕೊಂಡರು. `ಅರಣ್ಯ ಹಕ್ಕು ಸಮಿತಿಗಳ ಬೇಜವಬ್ದಾರಿಯಿಂದ ನಗರ ಅರಣ್ಯವಾಸಿಗಳು ಮಂಜೂರಿ ಪ್ರಕ್ರಿಯೆ ಅತಂತ್ರವಾಗಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ದೂರಿದರು. `ನಗರ ಅರಣ್ಯ ಅತಿಕ್ರಮಣದಾರರ ಮಂಜೂರಿ ಪ್ರಕ್ರಿಯೆಗೆ ವಾರ್ಡ ಸಮಿತಿಗಳು ಕಾನೂನು ಬದ್ದ ಸಮಿತಿ ರಚಿಸಿಲ್ಲ. ವಾರ್ಡ ಸಭೆ, ಜಿಪಿಎಸ್ ಸರ್ವೇ, ಕಾನೂನು ತಿಳುವಳಿಕೆ ಕೊರತೆಯಿಂದ ಈ ಅವಾಂತರವಾಗಿದೆ’ ಎಂದವರು ವಿವರಿಸಿದರು.
ಈ ಸಭೆಯಲ್ಲಿ ಕುಮಟಾ ಸಂಘಟನೆಯ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ, ಸೀತರಾಮ ನಾಯ್ಕ ಬುಗರಿಬೈಲ್, ಗಜಾನನ ಪಟಗಾರ ಹೆಗಡೆ, ಕುಸುಂಬಿ ಕಿಮಾನಿ, ರಮ್ಯ ಮುಕ್ರಿ, ಗಜಾನನ ನಾಯ್ಕ, ನವೀನ ಗಜಾನನ ನಾಯ್ಕ ಇದ್ದರು.