ಅರಣ್ಯ ಭೂಮಿ ಹಕ್ಕಿಗಾಗಿ ಆಗ್ರಹಿಸುತ್ತಿರುವ ಹೋರಾಟಕ್ಕೆ 33 ವರ್ಷ ಕಳೆದ ಹಿನ್ನಲೆ 33 ದಿನಗಳ ಕಾಲ ರಾಜ್ಯದ ಎಲ್ಲಡೆ ಜಾಥಾ ನಡೆಸಲು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಧರಿಸಿದೆ. ಪ್ರಮುಖ 5 ಕಾನೂನು ವಿಷಯಗಳನ್ನು ಆಧರಿಸಿ ಫೆ 15ರಿಂದ ಮುಂದಿನ 33 ದಿನಗಳವರೆಗೆ ಈ ಜಾಥಾ ನಡೆಯಲಿದೆ.
ಅರಣ್ಯ ಅತಿಕ್ರಮಣದಾರರಿಗೆ ಕಾನೂನು ಜ್ಞಾನ ಹೆಚ್ಚಿಸುವುದಕ್ಕಾಗಿ ಈ ಜಾಥಾ ಆಯೋಜಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ 163 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಈ ಜಾಥಾ ಸಂಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. `ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಮೂರು ತಲೆಮಾರಿನ ದಾಖಲೆ ಕೇಳಲಾಗುತ್ತಿದೆ. ಇದನ್ನು ಕೈ ಬಿಡಬೇಕು ಎನ್ನುವ ನಿಟ್ಟಿನಲ್ಲಿ ಈ ಜಾಥಾ ಆಯೋಜಿಸಲಾಗಿದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಸೋಮವಾರ ಕಾರವಾರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ರಾಜ್ಯದ 25 ಜಿಲ್ಲೆಗಳಲ್ಲಿ 2,95,048 ಅರ್ಜಿಗಳನ್ನು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿದ್ದಾರೆ. ಅದರಲ್ಲಿ 15,798 ಅರ್ಜಿಗಳಿಗೆ ಮಾತ್ರ ಹಕ್ಕು ಪತ್ರ ಸಿಕ್ಕಿದೆ. ಪ್ರಥಮ ಹಂತದಲ್ಲಿ 1,84,358 ಅರ್ಜಿಗಳು ತಿರಸ್ಕಾರವಾಗಿದೆ’ ಎಂಬ ಮಾಹಿತಿ ನೀಡಿದರು.
ಈ ಜನ ಜಾಗೃತಿ ಜಾಥಾ ಫೆ 15ರಂದು ಹೊನ್ನಾವರದಿಂದ ಶುರುವಾಗಲಿದೆ. ನಂತರ ಹೋರಾಟದ ವಾಹಿನಿಗಳ ಮೂಲಕ ರಾಜ್ಯಾದಂತ ಸಂಚಾರಿಸಲಿದೆ. ಸಂಘಟನೆ ಪ್ರಮುಖರಾದ ಇಬ್ರಾಹಿಂ ಗೌಡಳ್ಳಿ, ಮಂಜುನಾಥ ಮರಾಠಿ, ಭೀಮಶಿ ವಾಲ್ಮೀಕಿ, ಅಮೋಸ ಸ ಈದಾ, ಪೆಂಚಲಯ್ಯ ಕೊಸಿನಪೊಗು ಇತರರು ಸುದ್ದಿಗೋಷ್ಠಿಯಲ್ಲಿದ್ದರು.



