`ಪಿಯುಸಿ ಕಾಲೇಜಿನ ತರಗತಿಗಳಿಗೆ ಚಕ್ಕರ್ ಹೊಡೆಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಮನವೊಲೈಕೆ ಮಾಡಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. `ಯಾವ ವಿದ್ಯಾರ್ಥಿಯೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಗೈರಾಗದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
`ಪ್ರತಿಯೊಬ್ಬ ವಿದ್ಯಾರ್ಥಿಯ ಹಾಜರಾತಿಯನ್ನು ಕಾಲೇಜಿನವರು ಗಂಭೀರವಾಗಿ ಪರಿಗಣಿಸಬೇಕು. ಪದೇ ಪದೇ ತರಗತಿಗೆ ಗೈರಾಗುವ ವಿದ್ಯಾರ್ಥಿಗಳ ಬಗ್ಗೆ ವರದಿ ಸಲ್ಲಿಸಬೇಕು. ದ್ವಿತೀಯ ಪಿಯುಸಿ ತರಗತಿಗಳಿಗೆ ಗೈರರಾಗುತ್ತಿರುವವರ ವಿವರ ಪಡೆದು ಗ್ರಾಮ ಪಂಚಾಯತ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಜಿಲ್ಲಾಡಳಿತ ಹೇಳಿದೆ. ಇದರೊಂದಿಗೆ `ಪಿಯುಸಿ ಪರೀಕ್ಷೆಯಲ್ಲಿ ಗುಣಮಟ್ಟದ ಫಲಿತಾಂಶ ಬರುವ ನಿಟ್ಟಿನಲ್ಲಿ ಅಧ್ಯಾಪಕರು ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಲಾಗಿದೆ.
ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ಸೋಮವಾರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪಿಯುಸಿ ಮಕ್ಕಳ ಭವಿಷ್ಯ ಹಾಗೂ ಓದಿನ ಕುರಿತು ಚರ್ಚೆ ನಡೆಯಿತು. `ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಅಧ್ಯಯನದ ಬಗ್ಗೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ವಿಶೇಷ ಕಾಳಜಿವಹಿಸಬೇಕು. ಪ್ರತಿಯೊಬ್ಬರೂ ಉತ್ತೀರ್ಣರಾಗುವಂತೆ ಅವರನ್ನು ಪ್ರೇರೇಪಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ತಿಳಿಸಿದರು. `ದ್ವಿತೀಯ ಪಿಯುಸಿ ಪ್ರತಿ ವಿದ್ಯಾರ್ಥಿಯ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವ ಸಮಯವಾಗಿದೆ. ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಪ್ರೇರೇಪಣೆ ಅತ್ಯಂತ ಅಗತ್ಯ. ಪ್ರಾಧ್ಯಾಪಕರು ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಕಾಳಜಿವಹಿಸಬೇಕು. ಗೈರು ಹಾಜರಾದ ವಿದ್ಯಾರ್ಥಿಗಳ ಬಗ್ಗೆ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿವಹಿಸಿ, ಅವರು ಪರೀಕ್ಷೆಯಲ್ಲಿ ಉತೀರ್ಣರಾಗುವಂತೆ ಮಾಡಬೇಕು’ ಎಂದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಬೇಕು. ಜಿಲ್ಲೆಯು ಫಲಿತಾಂಶದಲ್ಲಿ ರ‍್ಯಾಂಕ್ ಬದಲು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಅತೀ ಮುಖ್ಯ’ ಎಂದರು.
`ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ಎದುರಿಸುವ ಬಗ್ಗೆ, ಪರೀಕ್ಷೆ ಕೊಠಡಿಯಲ್ಲಿ ಸಮಯ ಪಾಲನೆ ಬಗ್ಗೆ, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು. ಪ್ರಿಪೇರೇಟರಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಅವರಿಗೆ ಬೋಧನೆ ಮಾಡಬೇಕು. ಯಾವುದೇ ಹಂತದಲ್ಲೂ ವಿದ್ಯಾರ್ಥಿಗಳ ಮಾನಸಿಕ ಧೈರ್ಯ ಕುಂದದoತೆ ನಿರಂತರವಾಗಿ ಅವರನ್ನು ಪ್ರೆರೇಪಿಸಬೇಕು’ ಎಂದು ಕರೆ ನೀಡಿದರು. `ಜಿಲ್ಲೆಯ ಎಲ್ಲಾ ಕಾಲೇಜ್‌ಗಳಲ್ಲಿ ಸೇಫ್ಟಿ ಆಡಿಟ್ ನಡೆಸಿ, ಕಾಲೇಜು ಆವರಣ ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಇರುವ ಬಗ್ಗೆ ದೃಢಪಡಿಸಿಕೊಳ್ಳಿ. ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಕಾಲೇಜುಗಳಲ್ಲಿ ಅಣಕು ಪ್ರದರ್ಶನ ಆಯೋಜಿಸಿ. ಜೊತೆಗೆ ಕಾಲೇಜುಗಳಲ್ಲಿ ಸಿಇಟಿ ಮತ್ತು ನಿಟ್ ಪರೀಕ್ಷೆಗೆ ಆನ್‌ಲೈನ್ ಮೂಲಕ ತರಬೇತಿ ನೀಡಲು ಮೂಲಸೌಕರ್ಯಗಳ ಕೊರತೆಯಿದ್ದಲ್ಲಿ ಅದನ್ನು ಗಮನಕ್ಕೆ ತನ್ನಿ’ ಎಂದು ಸೂಚಿಸಿದರು.
`ದ್ವಿತೀಯ ಪಿಯುಸಿ ಫಲಿತಾಂಶ ವೃದ್ದಿಗಾಗಿ, ತರಗತಿಯಲ್ಲಿ ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಮನವೊಲಿಸಿ ಕಾಲೇಜಿಗೆ ಬರುವಂತೆ ಕ್ರಮವಹಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಕಾಲೇಜು ಅವಧಿಯ ಪ್ರಾರಂಭ/ನoತರದಲ್ಲಿ ವೇಳಾಪಟ್ಟಿ ಮಾಡಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ ಸಭೆಗೆ ತಿಳಿಸಿದರು. `ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕಾಲೇಜು ಹಂತದಲ್ಲಿ ಗುರುತಿಸಿ 5 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರನ್ನು ಮೇಲ್ವಿಚಾರಕರಂತೆ ನೇಮಿಸಲಾಗಿದೆ. ಹಿಂದುಳಿದ ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಗೊಳಿಸಲಾಗುತ್ತಿದ್ದು, ಎರಡು ಕಿರು ಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ, ಘಟಕ ಪರೀಕ್ಷೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿ ವಿದ್ಯಾರ್ಥಿಗ¼ ಪಾಲಕರಿಗೆ ಅವರ ಪ್ರಗತಿಯನ್ನು ತಿಳಿಸಲಾಗಿದೆ. ತಾಲೂಕುವಾರು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಮಿತಿಯನ್ನು ರಚಿಸಿ ಮೇಲುಸ್ತುವಾರಿ ಮಾಡಲಾಗುತ್ತಿದೆ’ ಎಂಬ ಮಾಹಿತಿ ನೀಡಿದರು.
`ಉಪನ್ಯಾಸಕರುಗಳಿಗೆ ಫಲಿತಾಂಶ ಉತ್ತಮ ಪಡಿಸಲು ಎರಡು ಪುನಶ್ಚೇತನ ಕಾರ್ಯಗಾರವನ್ನು ನಡೆಸಲಾಗಿದ್ದು, ಡಿಸೆಂಬರ್ ಅಂತ್ಯದಲ್ಲಿ ವಷÀðದ ಪಠ್ಯವನ್ನು ಪೂರ್ಣಗೊಳಿಸಿ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉಪಯೋಗಿಸಿಕೊಂಡು ಬೋಧಿಸಲಾಗುತ್ತಿದೆ’ ಎಂದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.



