ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುಕ್ರಜ್ಜಿ ಹಾಗೂ ತಮ್ಮ ನಡುವೆ ಇದ್ದ ಭಾವನಾತ್ಮಕ ಸಂಬoಧವನ್ನು ನೆನೆದು ಅವರೆಲ್ಲರೂ ಕಣ್ಣೀರಾಗಿದ್ದಾರೆ.
`ಸುಕ್ರಿ ಬೊಮ್ಮ ಗೌಡ ಅವರು ಬಾಲ್ಯದಲ್ಲಿದ್ದಾಗ ತಮ್ಮ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊAಡು ಹೋಗುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಹಾಡುಗಳು ಮಾತ್ರವಲ್ಲದೇ ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರ ಸೇವೆ ಸ್ಮರಿಸಿದ್ದಾರೆ.
`ಸುಕ್ರಿ ಬೊಮ್ಮ ಗೌಡ ನಿಧನ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ’ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಹೇಳಿದ್ದಾರೆ. `ಅಂಕೋಲಾ ತಾಲೂಕಿನ ಬಡಿಗೇರಿ ಎನ್ನುವ ಪುಟ್ಟ ಗ್ರಾಮದವರಾಗಿ ಅಕ್ಷರ ಜ್ಞಾನ ಇಲ್ಲದೇ ಹೋದರು ತಮ್ಮ ಜ್ಞಾನದ ಮೂಲಕ ಜಾನಪದ ಹಾಡುಗಳನ್ನ ಹೇಳಿ ಅವರು ಗಮನಸೆಳೆದಿದ್ದರು. ಹಾಲಕ್ಕಿ ಎನ್ನುವ ಪುಟ್ಟ ಸಮುದಾಯದ ಜನರ ಏಳಿಗೆಗಾಗಿ ಸುಕ್ರಿ ಸಾಕಷ್ಟು ಶರಮಿಸಿದ್ದರು. ಹಾಲಕ್ಕಿ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹೋರಾಟದ ಮುಂಚೂಣಿಯನ್ನ ಸುಕ್ರಿ ಗೌಡ ಹೊತ್ತಿದ್ದರು. ಅಲ್ಲದೇ ಸಾರಾಯಿ ಮುಕ್ತ ಗ್ರಾಮಕ್ಕಾಗಿ ಸುಕ್ರಿ ಹೋರಾಟ ಮಾಡಿ ಮಾದರಿ ವ್ಯಕ್ತಿಯಾಗಿದ್ದರು’ ಎಂದವರು ಹೇಳಿದ್ದಾರೆ. `ಸುಕ್ರಿ ಬೊಮ್ಮ ಗೌಡರ ನೆನಪು ಶಾಶ್ವತವಾಗಿರಿಸಲು ಅಂಕೋಲಾದಲ್ಲಿ ಅವರ ಹೆಸರಿನ ಮ್ಯೂಸಿಯಂ ಸ್ಥಾಪಿಸಬೇಕು. ಸುಕ್ರಜ್ಜಿಯ ಹೋರಾಟ, ಪ್ರಶಸ್ತಿಗಳು, ಜಾನಪದ ಗೀತೆಗಳ ಕುರಿತು ಅಲ್ಲಿ ಮುಂದಿನ ತಲೆಮಾರಿನವರಿಗೂ ಮಾಹಿತಿ ಒದಗಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. ಸಂಘಟನೆ ಪ್ರಮುಖರಾದ ರೋಷನ್ ಹರಿಕಂತ್ರ. ಸುದೇಶ್ ನಾಯ್ಕ. ಸುನಿಲ್ ತಾಂಡೇಲ್, ಪ್ರದೀಪ್ ಶೆಟ್ಟಿ, ರಫೀಕ್ ಉದ್ದಾರ್, ಮೋಹನ್ ಉಳ್ಳೇಕರ್ ಸಹ ಸಂತಾಪ ಸೂಚಿಸಿದ್ದಾರೆ.
ಇನ್ನೂ ಸುಕ್ರಿ ಗೌಡ ಅವರ ನಿಧನದ ಸುದ್ದಿ ಕೇಳಿದ ತಕ್ಷಣ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ಮನೆಗೆ ದೌಡಾಯಿಸಿದ್ದಾರೆ. ಸುಕ್ರಿ ಗೌಡ ಅವರ ಶವಕ್ಕೆ ಹೆಗಲು ಕೊಟ್ಟು ಅವರು ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಸುಕ್ರಿ ಗೌಡ ಅವರು ಅನಾರೋಗ್ಯಕ್ಕೆ ಒಳಗಾದಾಗ ಸಹ ಮಾಧವ ನಾಯಕ ಅಪಾರ ಕಾಳಜಿವಹಿಸಿದ್ದರು. ಅವರನ್ನು ಸಾಕಷ್ಟು ಬಾರಿ ಆಸ್ಪತ್ರೆಗೆ ಕರೆದೊಯ್ದು ಓಡಾಟ ಮಾಡಿದ್ದರು. ಇದರೊಂದಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಂಸದ ಅನಂತಕುಮಾರ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಇನ್ನಿತರರು ಸುಕ್ರಿ ಗೌಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.