ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೂ ಸರ್ಕಾರ ಅವರ ಅಳಲು ಆಲಿಸಿಲ್ಲ. ಈ ಹಿನ್ನಲೆ ಗ್ರಾಮ ಆಡಳಿತಾಧಿಕಾರಿಗಳು ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ.
ಶನಿವಾರ ಬೆಳಗ್ಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಗ್ರಾಮ ಆಡಳಿತಾಧಿಕಾರಿಗಳು ಭೇಟಿ ಮಾಡಿದರು. ತಾವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿದರು. ಗ್ರಾಮ ಆಡಳಿತಾಧಿಕಾರಿಗಳ ಕೆಲಸದ ಒತ್ತಡ, ಕುಳಿತುಕೊಳ್ಳಲು ಖುರ್ಚಿ-ಮೇಜಿನ ವ್ಯವಸ್ಥೆ ಸಹ ಇಲ್ಲದಿರುವ ಬಗ್ಗೆ ವಿವರಿಸಿದರು. ಸರ್ಕಾರಿ ಕೆಲಸ ನಿರ್ವಹಿಸಲು ಮೊಬೈಲ್ ಹಾಗೂ ಲಾಪ್‌ಟಾಪ್ ಅಗತ್ಯವಿರುವ ಬಗ್ಗೆ ತಿಳಿಸಿದರು. ಸುಸಜ್ಜಿತ ಕಚೇರಿ ಇಲ್ಲದಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿದರು. ವರ್ಗಾವಣೆ, ಮುಂಬಡ್ತಿ, ಪೌತಿ ಖಾತೆ ಆಂದೋಲನದ ಸಮಸ್ಯೆ, ಸೇವಾ ಭದ್ರತೆ ಇಲ್ಲದಿರುವಿಕೆ ಕುರಿತು ಸಮಗ್ರವಾದ ಮಾಹಿತಿ ನೀಡಿದರು.
ಗ್ರಾಮ ಆಡಳಿತಾಧಿಕಾರಿಗಳ ಮನವಿ ಸ್ವೀಕರಿಸಿದ ಶಿವರಾಮ ಹೆಬ್ಬಾರ್ `ಗ್ರಾಮೀಣ ಹಂತದಲ್ಲಿ ಕೆಲಸ ಮಾಡುವ ನೌಕರರ ಸಮಸ್ಯೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವೆ’ ಎಂಬ ಭರವಸೆ ನೀಡಿದರು. ಗ್ರಾಮ ಲೆಕ್ಕಾಧಿಕಾರಿಗಳ ಮುಷ್ಕರಕ್ಕೆ ಗ್ರಾಮ ಸಹಾಯಕರು ಬೆಂಬಲ ನೀಡಿದರು. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ ಯಲಿಗೌಡ, ಪ್ರಮುಖರಾದ ಗಜೇಂದ್ರ ಪಟಗಾರ, ಈಶ್ವರ ಪಟಗಾರ, ವಿದ್ಯಾ ಶೇಟ್ ಸೇರಿ 20ಕ್ಕೂ ಅಧಿಕ ಗ್ರಾಮ ಆಡಳಿತಾಧಿಕಾರಿಗಳು ಈ ವೇಳೆ ಹಾಜರಿದ್ದರು.