ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಇನ್ಮುಂದೆ ಅಂಚೆ ಇಲಾಖೆಯ ಎಲ್ಲಾ ಬಗೆಯ ಸೇವೆಗಳು ಸಿಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಗ್ರಾಮ ಒನ್ ಕೇಂದ್ರ ನಡೆಸುವವರಿಗೆ ಸೂಚನೆ ಹೊರಡಿಸಿದೆ.
ಅಂಚೆ ಇಲಾಖೆ ಇದೀಗ ಅಂಚೆ ಪತ್ರಗಳ ವಿತರಣೆಗೆ ಮಾತ್ರ ಸೀಮಿತವಾಗಲ್ಲ. ಜೀವ ವಿಮೆ, ಬ್ಯಾಂಕ್ ಸೌಕರ್ಯವನ್ನು ಸಹ ಅಂಚೆ ಇಲಾಖೆ ನೀಡುತ್ತಿದೆ. ಅಂಚೆ ಇಲಾಖೆ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದೆ. ಆ ಮೂಲಕ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ಒದಗಿಸುವಲ್ಲಿ ಅಂಚೆ ಇಲಾಖೆ ಮುಂದಿದೆ. ಅಂಚೆ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿ ಮಾಡುವುದಕ್ಕಾಗಿ ಪ್ರತಿ ಊರಿನ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಅಂಚೆ ಸೇವೆ ನೀಡುವ ಉದ್ದೇಶ ಸರ್ಕಾರದ ಮುಂದಿದೆ.
ರಾಜ್ಯ ಸರ್ಕಾರದ ವಿವಿಧ ಸೇವೆಗಳನ್ನು ಗ್ರಾಮೀಣ ಮಟ್ಟದಲ್ಲಿ ಒದಗಿಸುತ್ತಿರುವ ಗ್ರಾಮ ಒನ್ ಕೇಂದ್ರಗಳಿಗೆ ಗ್ರಾಮೀಣ ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರಿಗೆ ಅಂಚೆ ಇಲಾಖೆಯ ಬ್ಯಾಂಕ್ ಖಾತೆಗೆ ನೋಂದಣಿ, ಅತ್ಯಂತ ಕಡಿಮೆ ವೆಚ್ಚದ ಉತ್ತಮ ವಿಮಾ ಸೇವೆಗಳು, ಅಂಚೆ ಬ್ಯಾಂಕಿoಗ್ ಸೇವೆಗಳು, ಸಾಲ ವಿತರಣೆ ಮುಂತಾದ ಯೋಜನೆಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡುವಂತೆ ಗ್ರಾಮ ಓನ್ ಕೇಂದ್ರದವರಿಗೆ ಅಪರ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ ಕರೆ ನೀಡಿದ್ದಾರೆ.
ಸರ್ಕಾರದ ವಿವಿಧ ಯೋಜನೆಗಳ ಮೊತ್ತವನ್ನು ಫಲಾನುಭವಿಗಳಿಗೆ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತಿದ್ದು, ಫಲಾನುಭವಿಗಳು ಪೋಸ್ಟ್ ಬ್ಯಾಂಕ್ ಖಾತೆಗಳನ್ನು ಶೂನ್ಯ ಆರಂಭಿಕ ಠೇವಣಿಯೊಂದಿಗೆ ಕೇವಲ 5 ನಿಮಿಷಗಳ ಒಳಗೆ ತಮ್ಮ ಡಿಬಿಟಿ ಖಾತೆಗಳನ್ನು ಅಂಚೆ ಇಲಾಖೆಯಲ್ಲಿ ತೆರೆಯುವ ಸೌಕರ್ಯ ಒದಗಿಸಲಾಗಿದೆ.