ಭಕ್ತರೆಲ್ಲರೂ ಸೇರಿ ಚಂದ್ಗುಳಿ ಗಂಟೆ ಗಣಪನಿಗೆ ಹೊಸ ಆಲಯ ನಿರ್ಮಿಸಿದ್ದಾರೆ. ಪ್ರತಿಷ್ಠಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನ ಬಾಕಿಯಿದ್ದು, ಅದ್ಧೂರಿ ಮಹೋತ್ಸವದ ಖುಷಿಯಲ್ಲಿರುವ ಸಿದ್ದಿ ವಿನಾಯಕ ಸಮಿತಿಯವರು ಮಾಡುತ್ತಿರುವ ಕೆಲಸವನ್ನು ನೋಡುವುದರಲ್ಲಿಯೇ ಇದೀಗ ಬ್ಯುಸಿಯಾಗಿದ್ದಾನೆ!
ಇಷ್ಟಾರ್ಥ ಸಿದ್ದಿಗೆ ಯಲ್ಲಾಪುರದ ಚಂದ್ಗುಳಿಯ ಗಣಪತಿ ಹೆಸರು ಪ್ರಸಿದ್ಧಿ. ದೇಶ-ವಿದೇಶಗಳಲ್ಲಿ ಸಹ ಗಂಟೆ ಗಣಪತಿಗೆ ಭಕ್ತರಿದ್ದಾರೆ. ಸೋದೆಯ ಅರಸಪ್ಪ ನಾಯಕರ ಕಾಲದಲ್ಲಿ ಚಂದ್ಗುಳಿಯಲ್ಲಿ ಸಿದ್ದಿ ವಿನಾಯಕನನ್ನು ಸ್ಥಾಪಿಸಲಾಯಿತು. ಸೋದೆ ರಾಜರ ಕುಟುಂಬದ ಮಗುವಿಗೆ ನಾಲಿಗೆಯಿಂದ ಶುದ್ಧ ಅಕ್ಷರ ಹೊರಡದ ಕಾರಣ ಚಂದಗುಳಿಯ ಸಿದ್ಧಿವಿನಾಯಕನಲ್ಲಿ ಘಂಟೆ ಹರಕೆ ಹೊತ್ತಿದ್ದರು. ಅದಾದ ನಂತರ ಆ ಬಾಲಕನಿಗೆ ಮಾತು ಸರಿಯಾಯಿತು ಎಂಬುದು ಇಲ್ಲಿನ ಪ್ರತೀತಿ. ಹೀಗಾಗಿ ತೊದಲು ಮಾತನಾಡುವ ಮಕ್ಕಳ ಪಾಲಕರು ಇಲ್ಲಿ ಆಗಮಿಸಿ ಗಂಟೆ ಹರಕೆ ಹೋರುತ್ತಾರೆ. ಹರಕೆ ಈಡೇರಿದ ನಂತರ ಭಕ್ತಿಯಿಂದ ಘಂಟೆಯನ್ನು ಅರ್ಪಿಸುತ್ತಾರೆ.
1979ರಲ್ಲಿ ಗಂಟೆ ಗಣಪತಿ ದೇವಾಲಯಕ್ಕೆ ಗುಡಿಯೊಂದನ್ನು ನಿರ್ಮಿಸಲಾಯಿತು. ಆಗ, ಸ್ವರ್ಣವಲ್ಲೀಯ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು ಆಗಮಿಸಿದ್ದರು. 1995ರಲ್ಲಿ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಸ್ವಾಮಿಗಳು ಶಿಖರ ಪ್ರತಿಷ್ಠಾಪನೆ ಮಾಡಿದರು. ಆ ವೇಳೆ ಶಾಸ್ತೊಕ್ತವಾಗಿ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ನಿರ್ದೇಶನ ಸಿಕ್ಕಿದ್ದು, ಹಲವು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಕಟ್ಟಡ ಇದೀಗ ಪೂರ್ಣಗೊಂಡಿದೆ. ಹಾಂಗoತ, ಪೂರ್ಣ ಪ್ರಮಾಣದ ಕಟ್ಟಡ ಇನ್ನೂ ಪೂರ್ಣವಾಗಿಲ್ಲ. ಆ ಸಿದ್ದಿವಿನಾಯಕ ಆಶೀರ್ವಾದದಿಂದ ಸದ್ಯ ಸುಂದರ ಸಭಾಭವನ, ಚಂದ್ರಶಾಲೆ, ಗುರುಭವನ, ಯಾಗಶಾಲೆಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನೂ ಅನೇಕ ಕಟ್ಟಡಗಳ ನಿರ್ಮಾಣ ಕೆಲಸ ಬಾಕಿಯಿದೆ. ಎಲ್ಲವೂ ಅಂದುಕೊoಡoತೆ ನಡೆದರೆ, ಭಕ್ತರ ಬೇಡಿಕೆಯಂತೆ ಇಲ್ಲಿ ಅನ್ನ ಪ್ರಸಾದ ವಿತರಣೆ ಜಾರಿಗೆ ಬರಲಿದೆ. ವಸತಿ ಸೌಲಭ್ಯಗಳನ್ನು ಕಲ್ಪಿಸುವ ವಿಚಾರವಿದೆ.
ಅಂದ ಹಾಗೇ, ಫೆಬ್ರವರಿ 28ರಿಂದ ಮಾರ್ಚ 3ರವರೆಗೆ ಗಂಟೆ ಗಣಪನ ಸನ್ನಿಧಿಯಲ್ಲಿ ವಿಜ್ರಂಭಣೆಯ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇನ್ನೂ ಎಲ್ಲಾ ಭಕ್ತರನ್ನು ಆಮಂತ್ರಿಸಿ ಮುಗಿದಿಲ್ಲ. ಗಣ್ಯರ ಮನೆಗೆ ತೆರಳಿ ಅವರ ಬರುವಿಕೆಯನ್ನು ಖಚಿತಪಡಿಸಿಕೊಂಡಾಗಿಲ್ಲ. ಮಂಟಪಕ್ಕೆ ತೋರಣ ಕಟ್ಟುವುದು, ವಿದ್ಯುತ್ ಅಲಂಕಾರ ಮಾಡುವುದು, ಆಗಮಿಸಿದವರಿಗೆ ಊಟ-ಉಪಚಾರದ ವ್ಯವಸ್ಥೆ ನೋಡಿಕೊಳ್ಳುವುದು ಸೇರಿ ಸಣ್ಣ-ಪುಟ್ಟ ಕೆಲಸಗಳೆಲ್ಲವೂ ಬಾಕಿಯಿದ್ದು, ಒಟ್ಟಾರೆಯಾಗಿ ಎಲ್ಲಾ ಕೆಲಸವನ್ನು ನಿರ್ವಿಘ್ನವಾಗಿ ಮಾಡಿಕೊಡುವಂತೆ ದೇಗುಲ ಸಮಿತಿಯವರು ಗಣಪನಿಗೆ ಪ್ರಾರ್ಥಿಸಿ ಜವಾಬ್ದಾರಿವಹಿಸಿದ್ದಾರೆ!
ಸೇವೆ ಮಾಡಲು ಮುಕ್ತ ಅವಕಾಶವಿದೆ. ಸೇವೆಗೆ ಬರುವವರಿಗೆ ಸಮೀಪದ `ಯುಕೆ ನೇಚರ್ ಸ್ಟೇ’ ರೆಸಾರ್ಟಿನಲ್ಲಿ ಉಚಿತ ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ. ನಿಮ್ಮೆಲ್ಲರ ಬರುವಿಕೆಗಾಗಿ ಗಂಟೆ ಗಣಪನು ಕಾಯುತ್ತಿದ್ದು, ಭಕ್ತರ ಬೇಡಿಕೆ ಈಡೇರಿಸಲು ಗಣಪ ಕಾತರನಾಗಿದ್ದಾನೆ..
ಫೆ 28ರಿಂದ ಮಾರ್ಚ 3ರವರೆಗೆ.. ಮರೆಯದೇ, ಎಲ್ಲರೂ ಬರುವಿರಲ್ಲ?