ಸೆಂಟ್ರಿoಗ್ ಕೆಲಸದ ಸಾಮಗ್ರಿ ತರಲು ಹೊರಟಿದ್ದ ಕಾರ್ಮಿಕ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಹೊನ್ನಾವರದ ತೊಳಸಾಣೆ ರಾವನಕೊಡ್ಲುವಿನ ಶ್ರೀನಿವಾಸ ನಾಯ್ಕ (49) ಫೆ 13ರ ಸಂಜೆ ಹೊನ್ನಾವರ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ಅಠಾರದ ಬಳಿ ಅವರ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಶ್ರೀನಿವಾಸ ನಾಯ್ಕರನ್ನು ಅಲ್ಲಿದ್ದವರು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಈ ವಿಷಯ ಅರಿತ ಜಲವಳ್ಳಿ ಹೊಳಬದಕೇರಿಯ ನಾಗೇಶ ನಾಯ್ಕ ಅವರು ಶ್ರೀನಿವಾಸ ನಾಯ್ಕರ ಭಾವ ಜಗದೀಶ ನಾಯ್ಕರಿಗೆ ಫೋನ್ ಮಾಡಿದರು. ಅಪಘಾತದ ಬಗ್ಗೆ ವರದಿ ಒಪ್ಪಿಸಿದರು. ಜಗದೀಶ ನಾಯ್ಕರು ಕೂಡಲೇ ಆಸ್ಪತ್ರೆಗೆ ಹೋಗಿ ಗಾಯಗೊಂಡ ಶ್ರೀನಿವಾಸ ನಾಯ್ಕರನ್ನು ಮಾತನಾಡಿಸಿದರು. ಬೈಕಿನಿಂದ ಬಿದ್ದಿರುವುದನ್ನು ಖಚಿತಪಡಿಸಿಕೊಂಡ ನಂತರ ವೈದ್ಯರನ್ನು ವಿಚಾರಿಸಿದರು.
ಆಗ, ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಈ ಹಿನ್ನಲೆ ಶ್ರೀನಿವಾಸ ನಾಯ್ಕರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿಯೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶ್ರೀನಿವಾಸ ನಾಯ್ಕರ ಸಾವಿನ ಬಗ್ಗೆ ಜಗದೀಶ ನಾಯ್ಕ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಿದರು.