ಸಾಕಷ್ಟು ಶಿವ ಕ್ಷೇತ್ರವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವರಾತ್ರಿ ಉತ್ಸವಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ.
ಫೆ 21ರಿಂದ ಗೋಕರ್ಣದಲ್ಲಿ ಶಿವರಾತ್ರಿ ಉತ್ಸವ ಶುರುವಾಗಲಿದೆ. ಮುಂಜಾನೆ ಗಣೇಶ ಪೂಜೆ, ಧ್ವಜಾರೋಹಣ ನಡೆಯಲಿದ್ದು, 9 ದಿನಗಳ ಕಾಲ ಧೈವಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿ ದಿನವು ದೇವರ ದರ್ಶನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಬರಲಿದ್ದು, ಅವರಿಗೆ ನೆರಳಿನ ವ್ಯವಸ್ಥೆಗಾಗಿ ಪೆಂಡಾಲ್ ಹಾಕಲಾಗಿದೆ. ಶಿವರಾತ್ರಿಯ ಶಿವಯೋಗ ಮಹಾರ್ಪವದ ದಿನವಾದ ಫೆ 26ರಂದು ದುಪ್ಪಟ್ಟು ಜನ ಬರುವ ನಿರೀಕ್ಷೆಯಿದೆ. ಇದಕ್ಕಾಗಿ ಎಲ್ಲಾ ಬಗೆಯ ಸಿದ್ಧತೆಗಳು ಅಚ್ಚುಕಟ್ಟಾಗಿ ನಡೆದಿವೆ.
ದೇಗುಲ ಸಮಿತಿಯಿಂದ ಎರಡು ಹೊತ್ತು ಅಮೃತಾನ್ನ ಭೋಜನಶಾಲೆಯಲ್ಲಿ ಉಚಿತ ಪ್ರಸಾದ ಭೋಜನ, ಶಿವರಾತ್ರಿಯಂದು ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕುಡಿಯುವ ನೀರು ಸೇರಿ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ಮಂದಿರ ಶಿಖರ ಹಾಗೂ ಸುತ್ತಲಿನ ಪ್ರಕಾರದಲ್ಲಿ ವಿದ್ಯುತ್ ದೀಪಾಲಂಕಾರ ಕೆಲಸ ನಡೆಯುತ್ತಿದೆ. ಗೋಕರ್ಣದಲ್ಲಿ ರಥಸಪ್ತಮಿ ದಿನದಂದು ರಥಕ್ಕೆ ಪೂಜೆ ಸಲ್ಲಿಸಿ ರಥಕಟ್ಟುವ ಕಾರ್ಯ ರೂಢಿಗತ ಪರಂಪರೆಯAತೆ ನಡೆಯುತ್ತದೆ. ಹಾಲಕ್ಕಿ ಒಕ್ಕಲಿಗ ಸಮಾಜದವರು ತಮ್ಮ ನೈಪುಣ್ಯತೆಯಲ್ಲಿ ಏಳು ಅಂತಸ್ತಿನ ರಥವನ್ನ ಕಟ್ಟಿದ್ದು, ಅಡ್ಡ ಹಾಗೂ ಉದ್ದದಲ್ಲಿ ದಬ್ಬೆ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ದೇವರ ಧ್ವಜಾರೋಹಣದ ಬಳಿಕ ವಿವಿಧ ಬಣ್ಣದ ಆಕರ್ಷಕ ಪತಾಕೆ ಕಟ್ಟುವುದರ ಮೂಲಕ ಫೆ 28ರಂದು ನಡೆಯುವ ರಥೋತ್ಸವಕ್ಕೆ ಸಿದ್ದಗೊಳ್ಳಲಿದೆ.
ಹೆಚ್ಚುವರಿ ಬಸ್ಸು
ಮಹಾಶಿವರಾತ್ರಿ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ವಾ.ಕ.ರ.ಸಾ. ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 160 ಹೆಚ್ಚುವರಿ ವಿಶೇಷ ಸಾರಿಗೆ ಬಸ್ಸುಗಳ ಓಡಾಟ ನಡೆಸಲಿದೆ.
ಫೆ 22ರ ಶನಿವಾರ 23 ಭಾನುವಾರ ವಾರಂತ್ಯ ದಿನವಾಗಿದ್ದು, ಫೆ 26ರಂದು ಮಹಾಶಿವರಾತ್ರಿ ಹಬ್ಬವಿರುವುದರಿಂದ ಬೆಂಗಳೂರು ಮತ್ತು ಇತರೇ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿ0ದ ರಾಜ್ಯ/ಅಂತರರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಫೆ.21 ರ ಸಂಜೆ ಹಾಗೂ ಫೆ.22, 23 ರಂದು ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.