ಬಾಲಕನಿಗೆ ಬೈಕ್ ನೀಡಿದ ತಪ್ಪಿಗೆ ನ್ಯಾಯಾಲಯ ಆತನ ತಂದೆಗೆ 25 ಸಾವಿರ ರೂ ದಂಡ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪೊಲೀಸರು ನಿರಂತರವಾಗಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಪಿಎಸ್‌ಐ ವಿನೋದ ಎಸ್ ಕೆ ಸಿಬ್ಬಂದಿ ಜೊತೆ ಬೈಕಿಗೆ ಅಡ್ಡಲಾಗಿ ಕೈ ಮಾಡಿದಾಗ ಕಾಲೇಜು ವಿದ್ಯಾರ್ಥಿಯೊಬ್ಬ ಸಿಕ್ಕಿ ಬಿದ್ದಿದ್ದ. ಆತನಿಗೆ ಇನ್ನೂ ಸರಿಯಾಗಿ ಮೀಸೆ ಮೂಡಿರಲಿಲ್ಲ. ಬೈಕ್ ಓಡಿಸಲು ಪರವಾನಿಗೆಯೂ ಇರಲಿಲ್ಲ. ಪರವಾನಿಗೆ ಪಡೆಯಲು 18ರ ವಯಸ್ಸು ಆಗಿರಲಿಲ್ಲ.
ಹೀಗಾಗಿ ಆ ಬೈಕಿನ ಜೊತೆ ಬಾಲಕನನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಆತನ ಪಾಲಕರಿಗೆ ಫೋನ್ ಮಾಡಿ ಕರೆಯಿಸಿದರು. ಬಾಲಕನಿಗೆ ಬೈಕ್ ಕೊಡದಂತೆ ಬುದ್ದಿ ಮಾತು ಹೇಳಿದರು. ಅದಾದ ನಂತರ ಮಾಡಿದ ತಪ್ಪಿಗೆ ಪಶ್ಚಾತಾಪವಾಗಿ ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸಿದರು. ಅಪ್ರಾಪ್ತರ ಬೈಕ್ ಓಡಿಸುವಿಕೆಯಿಂದ ಹೆಚ್ಚಾಗುತ್ತಿರುವ ಅಪಘಾತದ ಬಗ್ಗೆ ವರದಿಯೊಂದಿಗೆ ಪೊಲೀಸರು ದೋಷಾರೋಪಣ ಪಟ್ಟಿಯನ್ನು ಹಳಿಯಾಳ ನ್ಯಾಯಾಯಕ್ಕೆ ಸಲ್ಲಿಸಿದರು.
ನ್ಯಾಯಾಧೀಶರ ಮುಂದೆ `ತಮ್ಮಿಂದ ತಪ್ಪಾಗಿದೆ’ ಎಂದು ಬಾಲಕನ ತಂದೆ ಮಹಮದ್‌ಸಾಬ್ ಮುನಿಯಾರ್ ಒಪ್ಪಿಕೊಂಡರು. ಅದಾಗಿಯೂ ನ್ಯಾಯಾಲಯ 25 ಸಾವಿರ ರೂ ದಂಡ ಪಾವತಿಸುವಂತೆ ಸೂಚಿಸಿತು. ಮಹಮದ್‌ಸಾಬ್ ದಂಡ ಪಾವತಿಸಿ ಮನೆಗೆ ಮರಳಿದರು.