ಪುಣ್ಯಕ್ಷೇತ್ರ ದರ್ಶನಕ್ಕೆ ಬಂದಿದ್ದ ಭಕ್ತರ ನಡುವೆ ಹೊಡೆದಾಟ ನಡೆದಿದೆ. ಬೆಂಗಳೂರಿನ ಭಕ್ತರು ರಾಮನಗರದ ಭಕ್ತರ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೆಲ ಯುವಕರು ಟಿಟಿ ವಾಹನದ ಮೂಲಕ ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ಅಲ್ಲಿ-ಇಲ್ಲಿ ಸುತ್ತಾಟ, ದೇಗುಲ ದರ್ಶನದ ನಂತರ ಅವರು ಓಂ ಕಡಲತೀರಕ್ಕೆ ತೆರಳಿದ್ದರು. ಈ ವೇಳೆ ಅಂಕೋಲಾ ಯಲ್ಲಾಪುರ ಗಡಿಯ ರಾಮನಗುಳಿ ಭಾಗದ ಭಕ್ತರು ಸಹ ಅಲ್ಲಿದ್ದರು. ಎರಡು ಭಕ್ತ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದಿದ್ದು, ದೊಡ್ಡ ಪ್ರಮಾಣದಲ್ಲಿ ಜಗಳವಾಯಿತು.
ಬೆಂಗಳೂರಿನ ಪ್ರವಾಸಿಗರು ಇದರಿಂದ ರೊಚ್ಚಿಗೆದ್ದರು. ರಾಮನಗುಳಿಯ ಗಣೇಶ ರಾಥೋಡ (26) ಮೇಲೆ ಮಾರಣಾಂತಿಕ ದಾಳಿ ನಡೆಸಿದರು. ಜೊತೆಗಿದ್ದ ಅವರ ಸ್ನೇಹಿತನಿಗೂ ಎರಡು ಏಟು ಬಾರಿಸಿದರು. ಬೆಂಗಳೂರಿನಿoದ ಬಂದವರ ಸಂಖ್ಯೆ ಹೆಚ್ಚಿದ್ದ ಕಾರಣ ರಾಮನಗುಳಿ ತಂಡದವರು ಜಾಸ್ತಿ ಮಾತನಾಡಲು ಆಗಲಿಲ್ಲ. ಬೆಂಗಳೂರು ಪ್ರವಾಸಿಗರ ಆಕ್ರಮಣವನ್ನು ರಾಮನಗುಳಿಯ ಇಬ್ಬರು ಅನಿವಾರ್ಯವಾಗಿ ಸಹಿಸಿಕೊಂಡರು.
ಟಿಟಿ ವಾಹನ ಅಲ್ಲಿಂದ ತೆರಳಿದ ನಂತರ ಗಣೇಶ ರಾಥೋಡ್ ಜೊತೆಗಿದ್ದವರು 108ಗೆ ಫೋನ್ ಮಾಡಿದರು. ಆಂಬುಲೆನ್ಸ ಮೂಲಕ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದರು. ಹೊಡೆದಾಟದ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.