ಕುಮಟಾದಿಂದ ಅಂಕೋಲಾ ಕಡೆ ಬರುತ್ತಿದ್ದ ಕಾರು ಶಿರೂರಿನಲ್ಲಿ ಬೈಕಿಗೆ ಡಿಕ್ಕಿಯಾಗಿದೆ. ಅದಾದ ನಂತರ ಎದುರಿನಿಂದ ಬರುತ್ತಿದ್ದ ಬಸ್ಸಿಗೂ ಗುದ್ದಿದೆ.
ಫೆ 23ರ ಮಧ್ಯಾಹ್ನ ಧಾರವಾಡದ ಅಂಕಿತಕುಮಾರ (26) ಆ ಕಾರು ಓಡಿಸುತ್ತಿದ್ದರು. ವೇಗವಾಗಿ ಕಾರು ಓಡಿಸಿದ ಅವರು ಮೊದಲು ಶಿರೂರು ಗ್ರಾಮದ ಬಳಿ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದರು. ಪರಿಣಾಮ ಆ ಬೈಕಿನಲ್ಲಿ ಚಲಿಸುತ್ತಿದ್ದ ರಮೇಶ ಹುಲಸ್ವಾರ ಅವರಿಗೆ ಪೆಟ್ಟಾಯಿತು.
ರಮೇಶ ಹುಲಸ್ವಾರ ಅವರ ಅವರ ಕೈ-ಕಾಲಿಗೆ ಗಾಯಗಳಾದವು. ಜೊತೆಗೆ ಬೈಕಿನ ಹಿಂದೆ ಕುಳಿತಿದ್ದ ಶಾಂತಿ ಹುಲಸ್ವಾರ ಅವರ ತಲೆಗೆ ಸಹ ಗಾಯವಾಯಿತು. ಅಪಘಾತದ ಬಗ್ಗೆ ಅರಿವಾದರೂ ಅಂಕಿತಕುಮಾರ ಕಾರು ನಿಲ್ಲಿಸಲಿಲ್ಲ. ಅದೇ ವೇಗದಲ್ಲಿ ಮುನ್ನುಗ್ಗಿದ್ದು, ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಸಹ ಕಾರು ಗುದ್ದಿದರು. ಅಂಕೋಲಾ ಘಟಕಕ್ಕೆ ಸೇರಿದ ಬಸ್ಸು ಅದಾಗಿದ್ದು, ಬಸ್ಸಿಗೂ ಅಲ್ಲಲ್ಲಿ ಹಾನಿಯಾಯಿತು. ಕಾರು ಜಖಂ ಗೊಂಡಿತು.
ಬೈಕಿಗೆ ಗುದ್ದಿ ಇಬ್ಬರಿಗೆ ಗಾಯ ಪಡಿಸಿದ ಕಾರು ಬಸ್ಸಿಗೆ ಸಹ ಡಿಕ್ಕಿ ಹೊಡೆದದನ್ನು ಸಹಿಸದ ಬಸ್ಸಿನ ಚಾಲಕ ಹಿರೆಗುತ್ತಿಯ ಗಂಗಾಧರ ನಾಯ್ಕ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಕಾರು ಚಾಲಕನ ಅತಿವೇಗ ಹಾಗೂ ಅಪಾಯಕಾರಿ ಚಾಲನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂಕಿತಕುಮಾರ ವಿಚಾರಣೆ ನಡೆಸಿದ್ದಾರೆ.