ಭಟ್ಕಳ ಬೇಂಗ್ರೆಯ ಬಂಗಾರಮಕ್ಕಿ ಗುಡ್ಡಕ್ಕೂ ಆಕಸ್ಮಿಕ ಬೆಂಕಿ ತಗುಲಿದೆ. ಇಲ್ಲಿ ಮೇವಿಗೆ ತೆರಳಿದ್ದ ಜಾನುವಾರುಗಳು ಕಂಗಾಲಾಗಿ ಓಡಿವೆ.
ಬಂಗಾರಮಕ್ಕಿಯ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದೆ. ಪರಿಣಾಮ ಅಲ್ಲಿದ್ದ ಹುಲ್ಲುಗಾವಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸೋಮವಾರ ಬೆಂಕಿ ತಗುಲಿದ ಅವಧಿಯಲ್ಲಿ ಹಲವು ಜಾನುವಾರುಗಳು ಅಲ್ಲಿ ಹುಲ್ಲು ಮೇಯುತ್ತಿದ್ದವು. ಬೆಂಕಿಯ ಜ್ವಾಲೆ ದೊಡ್ಡದಾದ ಹಾಗೇ ಅವು ದೊಡ್ಡದಾಗಿ ಕೂಗುತ್ತ ದಿಕ್ಕಾಪಾಲಾಗಿ ಓಡಿ ಜೀವ ಉಳಿಸಿಕೊಂಡವು.
ಇನ್ನೂ ಗುಡ್ಡದ ಹಲವು ಕಡೆ ಒಣಗಿದ ಮರಗಳಿದ್ದವು. ಅವು ಹೊತ್ತಿ ಉರಿದವು. ಅಲ್ಲಿದ್ದ ಕಲ್ಬಂಡೆಗಳು ಬೆಂಕಿಯ ಜ್ವಾಲೆಗೆ ಕೆಲ ಕಾಲ ಕೆಂಪು ಬಣ್ಣಕ್ಕೆ ತಿರುಗಿದ್ದವು. ಈ ದಿನ ವ್ಯಾಪಕ ಪ್ರಮಾಣದಲ್ಲಿ ಬಿಸಿಲು ಇದ್ದು, ಅದರೊಂದಿಗೆ ಅಗ್ನಿ ಅನಾಹುತವೂ ನಡೆದಿದ್ದರಿಂದ ಗುಡ್ಡದ ಮೇಲಿನ ಪ್ರಾಣಿ-ಪಕ್ಷಿಗಳು ತೊಂದರೆ ಅನುಭವಿಸಿದವು. ವಿವಿಧ ಪ್ರಾಣಿ-ಪಕ್ಷಿಗಳ ಚೀರಾಟ ಜನರಿಗೆ ಕೇಳಿಸುತ್ತಿದ್ದವು.
ಇನ್ನೂ ಗುಡ್ಡದ ತಪ್ಪಲಿನಲ್ಲಿ ಕೆಲವರು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಅಗ್ನಿ ಅವಘಡದ ಕಾರಣ ಅವರು ಆತಂಕ ವ್ಯಕ್ತಪಡಿಸಿದರು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಇಲ್ಲಿನ ಅಗ್ನಿ ಅವಘಡಕ್ಕೆ ಕಾರಣ ಗೊತ್ತಾಗಲಿಲ್ಲ.