ಯಲ್ಲಾಪುರ ತಾಲೂಕಿನ ಸವಣಗೇರಿ ಬಳಿಯ ಯರಕಿನಬೈಲಿನಲ್ಲಿ ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ತೋಟಕ್ಕೆ ಅಗ್ನಿ ಸ್ಪರ್ಶವಾದ ಕಾರಣ 4 ಎಕರೆಯ ಬೆಳೆ ಭಸ್ಮವಾಗಿದೆ.
ಇಲ್ಲಿನ ಈಶ್ವರ ಪಟಗಾರ ಹಾಗೂ ಮಹದೇವ ಪಾಠಣಕರ್ ತಮ್ಮ ಭೂಮಿಯಲ್ಲಿ ಅಡಿಕೆ, ತೆಂಗಿನ ಜೊತೆ ಕಬ್ಬು ಬೆಳೆದಿದ್ದರು. ಅಲ್ಲಲ್ಲಿ ಮಾವಿನ ಗಿಡಗಳನ್ನು ಸಹ ನಾಟಿ ಮಾಡಿದ್ದರು. ಸೋಮವಾರ ವ್ಯಾಪಕ ಪ್ರಮಾಣದಲ್ಲಿ ಬಿಸಿಲಿದ್ದು, ಭೂಮಿಯ ತಾಪಮಾನವೂ ಹೆಚ್ಚಿತ್ತು. ಮಧ್ಯಾಹ್ನದ ವೇಳೆ ಇಲ್ಲಿ ಹಾದು ಹೋದ ವಿದ್ಯುತ್ ತಂತಿ ತುಂಡಾಗಿ ತೋಟದಲ್ಲಿ ಬಿದ್ದಿತು. ಪರಿಣಾಮ ಅಲ್ಲಿ ಅಗ್ನಿ ಅವಘಡ ಉಂಟಾಯಿತು.
ಕ್ಷಣ ಮಾತ್ರದಲ್ಲಿಯೇ ವ್ಯಾಪಕ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿತು. ಅಡಿಕೆ, ತೆಂಗಿನ ಮರಗಳು ಬೆಂಕಿಗೆ ಹೊತ್ತಿ ಉರಿದವು. ಕಬ್ಬಿನ ತೋಟಕ್ಕೆ ಅಂಟಿದ ಬೆಂಕಿ ದೊಡ್ಡ ಪ್ರಮಾಣದ ಜ್ವಾಲೆಯನ್ನು ಸೃಷ್ಠಿಸಿತು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಣ್ಣ ಮುಂದೆಯೇ ತೋಟ ಹೊತ್ತಿ ಉರಿಯುತ್ತಿರುವುದನ್ನು ನೋಡಿದರೂ ಮಾಲಕರಿಂದ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇನ್ನೂ ವಿದ್ಯುತ್ ತಂತಿಗಳಲ್ಲಿ ಓವರ್ ಲೋಡ್ ಸಾಧ್ಯತೆಯಿಂದ ತಂತಿ ತುಂಡಾದ ಬಗ್ಗೆ ಮಾಹಿತಿಯಿದೆ. ಹೆಸ್ಕಾಂ ಅಧಿಕಾರಿಗಳು ಸಹ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಪಕ್ಕದ ಅರಣ್ಯ ಪ್ರದೇಶಕ್ಕೆ ಸಹ ಬೆಂಕಿ ವ್ಯಾಪಿಸಿದ್ದು, ಅದನ್ನು ನಿಯಂತ್ರಿಸಲಾಗಿದೆ.