ಬಂದರು ಕಾಮಗಾರಿ ಹಿನ್ನಲೆ ಫೆ 25ರಂದು ಹೊನ್ನಾವರದ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದ ಸಮುದ್ರಗುಂಟ ಪ್ರದೇಶದವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ.
ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಹತ್ತಿರದಲ್ಲಿರುವ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದಲ್ಲಿ ಸಮುದ್ರಗುಂಟದ ರಸ್ತೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಫೆ 25ರಂದು ಸರ್ವೇ ಕಾರ್ಯ ನಡೆಯಲಿದೆ. ಬಂದರು ಅಭಿವೃದ್ಧಿ ಯೋಜನಾ ಸ್ಥಳದವರೆಗೆ ಹೋಗುವ ರಸ್ತೆ ಕಾಮಗಾರಿಯ ಸರ್ವೆ ಕಾರ್ಯವೂ ಈ ದಿನ ಜರುಗಲಿದೆ.
ಈ ಹಿನ್ನಲೆ ಸುತ್ತಲಿನ ಪ್ರದೇಶದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163ರನ್ವಯ ಫೆಬ್ರವರಿ 25ರಂದು ಬೆಳಿಗ್ಗೆ 6 ಗಂಟೆಯಿAದ ರಾತ್ರಿ 9 ಗಂಟೆಯರೆಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಈ ಅವಧಿಯಲ್ಲಿ ಗರಿಷ್ಟ 5 ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸುವ ಹಾಗಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುವ ಹಾಗೇ ಘೋಷಣೆ ಕೂಗುವ ಹಾಗಿಲ್ಲ. ಯಾವುದೇ ಬಗೆಯ ಆಯುಧ, ದೊಣ್ಣೆ-ಚಾಕುಗಳನ್ನು ಹಿಡಿದು ಸಂಚರಿಸುವ ಹಾಗಿಲ್ಲ. ಸ್ಪೋಟಕ ಸಾಮಗ್ರಿಗಳ ಬಳಕೆ ಸಹ ನಿಷೇಧಿಸಲಾಗಿದೆ.