ದೇಶಿಯ ಗೋವುಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ ಗುರು ನಾಯಕ ಹಾಗೂ ಅಕ್ಷಯಾ ನಾಯಕ ದಂಪತಿ ಗೋ ರಕ್ಷಣೆ ಜೊತೆ ಅವುಗಳನ್ನು ನಿತ್ಯವೂ ಆರಾಧಿಸುತ್ತಿದ್ದಾರೆ. ಯಾರಿಗೂ ಬೇಡವಾದ ಗಂಡು ಕರುಗಳನ್ನು ಸಹ ಅವರು ಅಕ್ಕರೆಯಿಂದ ಸಾಕಿ ಬೆಳಸಿದ್ದಾರೆ. ಅಷ್ಟೇ ಅಲ್ಲ, ದೇಶಿಯ ತಳಿಯ ಎತ್ತುಗಳನ್ನು ಬಳಸಿಕೊಂಡು ಅವರು ಸಾಂಪ್ರದಾಯಿಕ ಶೈಲಿಯ ಎಣ್ಣೆ ಗಾಣವನ್ನು ನಿರ್ಮಿಸಿದ್ದಾರೆ!
ಬಾಲ್ಯದಿಂದಲೂ ಗುರು ನಾಯಕ ಅವರಿಗೆ ಗೋವುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅವರನ್ನು ವರಿಸಿದ ಅಕ್ಷಯಾ ನಾಯಕ ಅವರಿಗೂ ಗೋವುಗಳನ್ನು ಕಂಡರೆ ಅಷ್ಟೇ ಅಕ್ಕರೆ. ಉತ್ತಮ ವೇತನದ ಉದ್ಯೋಗವಿದ್ದರೂ ಕೊರೊನಾ ಕಾಲಘಟ್ಟದಲ್ಲಿ ಆ ಉದ್ಯೋಗ ತೊರೆದು ತವರಿಗೆ ಬಂದ ಈ ದಂಪತಿಯನ್ನು ಸೆಳೆದಿದ್ದು ಸಾವಯವ ಕೃಷಿ. ಆರೋಗ್ಯ ಕಾಳಜಿ ಬಗ್ಗೆ ಕೊರೊನಾ ಕಲಿಸಿದ ಪಾಠದ ಪರಿಣಾಮ ಅವರು `ಕೊಗ್ರೇ ನ್ಯಾಚುರಲ್ಸ’ ಎಂಬ ಹೆಸರಿನ ಅಡಿ ಶುದ್ಧ ಎಣ್ಣೆ ಸಂಸ್ಕರಣಾ ಘಟಕ ಸ್ಥಾಪಿಸಿದರು. ನಾಲ್ಕು ಸಾವಿರ ವರ್ಷಗಳ ಹಿಂದಿನ ಶೈಲಿಯಲ್ಲಿ ಸಾಂಪ್ರದಾಯಿಕ ವಿಧಾನ ಅನುಸರಿಸಿ ಅವರು ಎತ್ತಿನಗಾಣದಿಂದ ತೆಗೆಯುವ ಎಣ್ಣೆಗೆ ಇದೀಗ ಎಲ್ಲಡೆ ಬೇಡಿಕೆ!
ಬೆಟ್ಟ ಭೂಮಿಯಲ್ಲಿ ಸಮೃದ್ಧ ಕೃಷಿ!
ಅಂಕೋಲಾದಿoದ 6ಕಿಮೀ ದೂರದ ಸಿಂಗನಮಕ್ಕಿಯಲ್ಲಿ ಗುರು ನಾಯಕ ಅವರಿಗೆ ಪಿತ್ರಾರ್ಜಿತವಾಗಿ ಎರಡುವರೆ ಎಕರೆ ಬೇಣವಿದೆ. `ಆ ಬೇಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ’ ಎಂದವರೇ ಹೆಚ್ಚು. ಆದರೆ, ಮೂರೇ ವರ್ಷದಲ್ಲಿ ಆಡಿಕೊಂಡವರೆಲ್ಲರೂ ಹುಬ್ಬೇರಿಸುವ ರೀತಿಯಲ್ಲಿ ಗುರು ನಾಯಕ ದಂಪತಿ ಮೂರು ವರ್ಷದಲ್ಲಿ ದುಡಿದು ತೋರಿಸಿದ್ದಾರೆ. ಗೇರು ಹಣ್ಣಿನ ಗಿಡಗಳಿಂದ ಕೂಡಿದ್ದ ಆ ಬೆಟ್ಟದಲ್ಲಿ ಬಗೆ ಬಗೆಯ ಹಣ್ಣಿನ ಗಿಡಗಳನ್ನು ಅವರು ಬೆಳೆದಿದ್ದಾರೆ. ಮನೆ ಬಳಕೆಗೆ ಅಗತ್ಯವಿರುವ ತರಕಾರಿಯನ್ನು ಅವರು ಅಲ್ಲಿ ಬೆಳೆಯುತ್ತಾರೆ. ಒಂದಷ್ಟು ಜಾಗವನ್ನು ಕಾಡು ಕೃಷಿಗೆ ಮೀಸಲಿಟ್ಟಿದ್ದಾರೆ. ಇದೆಲ್ಲದರ ನಡುವೆ ತಾವು ಪ್ರೀತಿಯಿಂದ ಸಾಕಿದ ದೇಶಿ ತಳಿಯ ಜಾನುವಾರುಗಳ ಬಳಕೆಗೆ ಹುಲ್ಲುಗಾವಲು ನಿರ್ಮಿಸಿದ್ದಾರೆ.
ಉತ್ತಮ ಓದು, ಓದಿಗೆ ತಕ್ಕ ಉದ್ಯೋಗ, ಉದ್ಯೋಗಕ್ಕೆ ಅರ್ಹ ವೇತನ ಸಿಗುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಹಾಳು ಬಿದ್ದಿದ್ದ ಬೆಟ್ಟದ ಭೂಮಿಯಲ್ಲಿ ಮಾಡಿದ ಸಾಹಸ ಒಂದೆರಡಲ್ಲ. ಊರಿಗೆ ಮರಳಿದ ನಂತರ ಮೊದಲು ಕೊಟ್ಟಿಗೆ ನಿರ್ಮಿಸಿದ ಅವರು ಮಲೆನಾಡ ಗಿಡ್ಡ ಆಕಳನ್ನು ಸಾಕಿದರು. ಆ ಹಸುವಿಗೆ ಹುಟ್ಟಿದ ಎರಡು ಗಂಡು ಕರುಗಳನ್ನು ಮಕ್ಕಳ ಹಾಗೇ ಜೋಪಾನ ಮಾಡಿದರು. ನಂತರ ಗೀರ್ ಹಾಗೂ ಹಳ್ಳಿಕಾರ್ ಎತ್ತುಗಳನ್ನು ಖರೀದಿಸಿದರು. ಆ ಎತ್ತುಗಳನ್ನು ಬಳಸಿಕೊಂಡು ಎಣ್ಣೆ ಗಾಣದ ಘಟಕವನ್ನು ಶುರು ಮಾಡಿದರು. ಆ ಮೂಲಕ ಅನುಪಯುಕ್ತ ಜಾಗವನ್ನು ಸಹ ಅವರು ಸಮರ್ಥವಾಗಿ ಬಳಸಿಕೊಂಡರು. ಕೊಟ್ಟಿಗೆಯಲ್ಲಿ ಗಂಡು ಕರು ಹುಟ್ಟಿದರೆ ಅದನ್ನು ಖಸಾಯಿಖಾನೆಗೆ ಕಳುಹಿಸುವವರ ನಡುವೆ ಗುರು ನಾಯಕ ದಂಪತಿ ಆ ಗಂಡು ಕರುವನ್ನು ಫೋಷಿಸಿ ಅವುಗಳ ಗಂಜಲ-ಗೊಬ್ಬರದಿoದ ಸಾವಯವ ಕೃಷಿ ಮಾಡುತ್ತಿದ್ದಾರೆ.
ಎತ್ತಿನ ಗಾಣದಿಂದ ಸಿದ್ಧಪಡಿಸಿದ ಎಣ್ಣೆ ಏಕೆ ಶ್ರೇಷ್ಠ? ವಿಡಿಯೋ ನೋಡಿ.. ಇನ್ನಷ್ಟು ವಿಷಯ ಮುಂದೆ ಓದಿ..
ಯoತ್ರೋಪಕರಣಗಳ ಭರಾಟೆ, ಎಲ್ಲೆಂದರಲ್ಲಿ ತಲೆಯೆತ್ತಿರುವ ಗಿರಣಿಗಳ ನಡುವೆ ಅಪ್ಪಟ ದೇಶಿಯ ಸಂಸ್ಕೃತಿಯಲ್ಲಿ ಎತ್ತುಗಳನ್ನು ಬಳಸಿ ಗಾಣದಿಂದ ಎಣ್ಣೆ ತೆಗೆಯುವ ಪದ್ಧತಿ ಕರಾವಳಿ ಭಾಗದ ಅಂಕೋಲಾ ಬಿಟ್ಟು ಬೇರೆ ಎಲ್ಲಿಯೂ ಇಲ್ಲ. ಪುರಾತನ ಶೈಲಿಯಲ್ಲಿ ಈಗಲೂ ತೆಂಗು ಹಾಗೂ ಶೆಂಗಾ ಎಣ್ಣೆಯನ್ನು ತಯಾರಿಸುತ್ತಾರೆ. ಎಣ್ಣೆ ತಯಾರಿಸಿದ ನಂತರ ದೊರೆಯುವ ಹಿಂಡಿಯನ್ನು ಜಾನುವಾರುಗಳ ಪೌಷ್ಠಿಕತೆಗೆ ಬಳಸುತ್ತಾರೆ. ಕೋಳಿಗಳಿಗೂ ಅದನ್ನು ಆಹಾರವಾಗಿ ನೀಡುತ್ತಾರೆ. ಇದರೊಂದಿಗೆ ಶೇಂಗಾ ಹಿಂಡಿ 50ರೂ ಹಾಗೂ ಕೊಬರಿ ಹಿಂಡಿಯನ್ನು 20ರೂ ಕೆಜಿ ದರದಲ್ಲಿ ಮಾರಾಟ ಮಾಡುತ್ತಾರೆ. ಉಳಿದವನ್ನು ತೋಟದ ಗೊಬ್ಬರವನ್ನಾಗಿ ಬಳಸುತ್ತಾರೆ.
ಗ್ರಾಮಗಳ ಅಭಿವೃದ್ಧಿಗೆ ಒತ್ತು:
ಇನ್ನೂ `ಗಿರಣಿ ಮೂಲಕ ಎಣ್ಣೆ ತೆಗೆಯುವುದರಿಂದ ಅಲ್ಲಿನ ಬಿಸಿಗೆ ಪೌಷ್ಠಿಕ ಅಂಶಗಳು ಸುಟ್ಟು ಹೋಗುತ್ತವೆ. ಎತ್ತಿನ ಗಾಣದ ಮೂಲಕ ಎಣ್ಣೆ ತೆಗೆಯುವುದರಿಂದ ಪೌಷ್ಠಿಕ ಅಂಶಗಳು ಎಣ್ಣೆಯಲ್ಲಿಯೇ ಉಳಿಯುತ್ತವೆ’ ಎಂದು ಗುರು ನಾಯಕ ಕಂಡುಕೊoಡಿದ್ದಾರೆ. ಗುರು ನಾಯಕ ಅವರು ರೈತರು ನೀಡಿದ ಕೊಬ್ಬರಿಯನ್ನು ಸಹ ಉತ್ತಮ ಬೆಲೆಗೆ ಖರೀದಿಸುತ್ತಾರೆ. ಯೋಗ್ಯ ಬೆಲೆಗೆ ಎಣ್ಣೆಯನ್ನು ಬ್ರಾಂಡಿoಗ್ ಮಾಡಿ ಮಾರಾಟ ಮಾಡುತ್ತಾರೆ. ಈ ಕೆಲಸಕ್ಕಾಗಿ ಅವರು ಇಬ್ಬರನ್ನು ನೇಮಿಸಿಕೊಂಡಿದ್ದು, ಕೆಲಸಗಾರರ ಕುಟುಂಬ ಸಹ ಈ ಎಣ್ಣೆ ತಯಾರಿಕಾ ಘಟಕದಿಂದ ಬದುಕು ಕಟ್ಟಿಕೊಂಡಿದೆ. ಇನ್ನೂ ಯಾವುದಾದರೂ ಬಿಸ್ಕತ್/ಚಾಕಲೇಟ್ ಕಂಪನಿಯವರು ಕೊಬರಿ ಹಿಂಡಿ ಖರೀದಿಸಲು ಆಸಕ್ತಿವಹಿಸಿದರೆ ಅದನ್ನು ಪೂರೈಸಲು ಗುರು ನಾಯಕ ದಂಪತಿ ಸಿದ್ಧವಾಗಿದ್ದಾರೆ.
ಇನ್ನೂ ಅವರು ಬಳಸುತ್ತಿರುವ ಗಾಣ ಸಹ ಬೇರೆ ಕಡೆಯಿಂದ ಖರೀದಿ ಮಾಡಿದಲ್ಲ. ಸ್ವತಃ ಆಲೋಚನೆಯಿಂದ ಗಾಣ ಸಿದ್ದಪಡಿಸಿ ಗುರು ನಾಯಕ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಮೊದಲು ಮರದ ಗಾಣ ತಯಾರಿಸುವ ಯೋಜನೆಯಲ್ಲಿದ್ದ ಗುರು ನಾಯಕ ಅವರಿಗೆ ಕಲ್ಲಿನ ಗಾಣ ಸಿದ್ದಪಡಿಸಲು ನೆರವಾದವರು ಅವರ ಮಾವ ನಾರಾಯಣ ನಾಯಕರು. ಕುದ್ರಿಗೆಯ ಅಕ್ಷಯಾ ರೈಸ್ ಮಿಲ್ ಮಾಲಕರಾಗಿರುವ ಅವರು ಸಾಕಷ್ಟು ಮುತುವರ್ಜಿವಹಿಸಿ ಗಾಣ ತಯಾರಿಕೆಗೆ ನೆರವಾಗಿದ್ದಾರೆ. ಇನ್ನೂ ಈ ಘಟಕಕ್ಕೆ ಭೇಟಿ ನೀಡಿದ್ದ ನ್ಯಾಯವಾದಿ ನಾಗರಾಜ ನಾಯಕ ಅವರು `ಕೋಗ್ರೆ ನ್ಯಾಚುರಲ್ಸ್’ ಎಂಬ ಹೆಸರು ಸೂಚಿಸಿದ್ದು, ಅದೇ ಹೆಸರಿನಲ್ಲಿ ಶುದ್ಧ ಎಣ್ಣೆ ತಯಾರಿಕಾ ಘಟಕ ಮುನ್ನಡೆಯುತ್ತಿದೆ.
ಸಾಂಪ್ರದಾಯಿಕ ಶೈಲಿಯ ಗಾಣದಿಂದ ಪಡೆದ ಎಣ್ಣೆ ಖರೀದಿಗೆ…
ರೈತರ ಬಳಿಯಿರುವ ಕೊಬ್ಬರಿಯನ್ನು ಯೋಗ್ಯ ಬೆಲೆಯೊಂದಿಗೆ ಮಾರಾಟಕ್ಕೆ…
ಹಾಗೂ ಕೊಬ್ಬರಿಯ ಹಿಂಡಿ ಅಗತ್ಯವಿದ್ದವರಿಗೆ ಈ ಲೇಖನ ಸಹಕಾರಿ…
`ಕೊಗ್ರೇ ನ್ಯಾಚುರಲ್ಸ’ ಗುರು ನಾಯಕ ಅವರ ಸಂಪರ್ಕ ಸಂಖ್ಯೆ: 9945918672