ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ಪಟ್ಟ ಸಿಕ್ಕರೇ `ಏನು ಮಾಡಿದ್ರೂ ತಮ್ಮದು ನಡೆಯುತ್ತೆ’ ಎನ್ನುವ ಮನೋಭಾವ ನಟರಲ್ಲಿದೆ. ದರ್ಶನ್ ಕೊಲೆ ಆರೋಪದ ಸುದ್ದಿ ನೋಡುತ್ತಿರುವಾಗ ನನಗೆ ನೆನಪಾಗಿದ್ದು ದುನಿಯ ವಿಜಿ. ಚಿತ್ರರಂಗದಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿಕೊಂಡಿದ್ದ ವಿಜಿ ದುನಿಯ ಸಿನಿಮಾ ದಲ್ಲಿ ಒಂದಿಷ್ಟು ಫ್ರೇಮ್ ಸಿಕ್ಕಿತ್ತು. ಹೀಗಾಗಿ ತಾನೊಬ್ಬ ದೊಡ್ಡ ಹೀರೋ ಎನ್ನುವ ಅಮಲು ಆಗಷ್ಟೇ ಆತನಿಗೆ ಏರಿಬಿಟ್ಟಿತ್ತು.ಶುಭಾ ಪೊಂಜಾ ಕೂಡ ಆಗಷ್ಟೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಬ್ಬರೂ ಸೇರಿ ಸಿನಿಮಾ ಮಾಡಿದ್ದರು. ಜೊತೆಗೆ ಸಿನಿಮಾ ಸ್ನೇಹ ಆಂತರಿಕ ಒಳನಾಟದ ಸ್ನೇಹಕ್ಕೆ ಬದಲಾಗಿತ್ತು. ಇನ್ನು ಇಬ್ಬರೂ ಶಿವಮೊಗ್ಗ ಭಾಗದ ರೆಸಾರ್ಟ್ ನಲ್ಲಿ ಸುತ್ತಾಡುವ ಸುದ್ದಿ ನಮ್ಮ ಕಿವಿಗೆ ಬಿದ್ದಿತ್ತು. ಆಗ ನಾನು ಸುವರ್ಣ ನ್ಯೂಸ್ ನಲ್ಲಿ ಶಿವಮೊಗ್ಗ ದಲ್ಲಿ ಕಾರ್ಯನಿರ್ವಹಿಸುತಿದ್ದೆ.
ಕೊನೆಗೂ ಒಂದು ದಿನ ಇಬ್ಬರೂ ನನ್ನ ಕ್ಯಾಮರಾ ದಲ್ಲಿ ಸೆರೆ ಸಿಕ್ಕಿದ್ದರು. ಇನ್ನೇನು ತನ್ನ ಬಂಡವಾಳ ಹೊರ ಜಗತ್ತಿಗೆ ತಿಳಿಯುತ್ತೆ ಎನ್ನುವ ಹೆದರಿಕೆಯಲ್ಲಿ ಆತ ನನ್ನಮೇಲೆ ಮುಗಿಬಿದ್ದಿದ್ದ, ಹಲ್ಲೆಮಾಡುವಾಗ ಸ್ಥಳೀಯ ಜನರು ತಡೆದರು,ಪೊಲೀಸರು ತಕ್ಷಣ ಸ್ಥಳಕ್ಕೆ ಬಂದಿದ್ದರಿoದ ನಾನು ಮಾರಣಾಂತಿಕ ಹಲ್ಲೆಯಿಂದ ಬಚಾವ್ ಆಗಿದ್ದೆ.
ಇನ್ನು ಶಿವಮೊಗ್ಗ ನಗರ ಠಾಣೆಯಲ್ಲಿ ನಾನು ದುನಿಯಾ ವಿಜಿ ಹಾಗೂ ಶುಭ ಪೂಂಜಾ ವಿರುದ್ಧ ದೂರು ನೀಡಿದ್ದೆ.ಆಗ ಎಸ್.ಪಿ ಯಾಗಿ ಮುರುಗನ್ ರವರಿದ್ದರು. ಖಡಕ್ ಆಗಿ ಎಫ್.ಐ .ಆರ್ ದಾಖಲಿಸುವಂತೆ ಸೂಚಿಸಿದ್ದರು. ಇನ್ನು ಈ ಸುದ್ದಿ ಶಿವಮೊಗ್ಗದ ಜನರ ಕಿವಿ ಮುಟ್ಟುತಿದ್ದಂತೆ ಹಲವು ಸಂಘಟನೆಗಳು ನನ್ನ ಬೆಂಬಲಕ್ಕೆ ಬಂದರು ,ಜೊತೆಗೆ ಪತ್ರಕರ್ತರು ಸಹ. ಆಗ ಸುವರ್ಣ ನ್ಯೂಸ್ ಸಂಪಾದಕರಾಗಿದ್ದ ಶಶಿಧರ್ ಭಟ್ ರವರ ಮಧ್ಯ ಪ್ರವೇಶವಾಗಿತ್ತು. ನಮ್ಮ ಸಂಪಾದಕರಾದ್ದರಿoದ ಅವರ ಮಾತು ಕೇಳಬೇಕಾಗಿತ್ತು. ಇನ್ನು ಪೊಲೀಸರು ಸಹ ದುನಿಯ ವಿಜಿ ಹಾಗೂ ಶುಭ ಪೂಂಜಾ ರನ್ನ ಠಾಣೆಗೆ ಎಳೆತಂದು ಜೈಲಿಗೆ ಕಳುಹಿಸಲು ಎಲ್ಲಾ ತಯಾರಿ ಮಾಡಿದ್ದರು. ಆಗ ಎಂಟ್ರಿ ಆಗಿದ್ದೇ ಶಿವಮೊಗ್ಗದ ಶಾಸಕ ಈಶ್ವರಪ್ಪ.ಜಾತಿ ಕಾರಣಕ್ಕೆ ದುನಿಯ ವಿಜಿ ಬೆಂಬಲವಾಗಿ ನಿಂತಿದ್ದರು. ಇನ್ನೇನು ಪ್ರಕರಣ ದಾಖಲಾಗಬೇಕು ಎನ್ನುವಷ್ಟರಲ್ಲಿ ನಮ್ಮ ಸಂಪಾದಕರ ಕರೆ ಬಂದಿತ್ತು. ದೂರು ದಾಖಲಿಸಬೇಡ ಹಿಂದೆ ತಗೋ ಎಂದಿದ್ದರು. ನನಗೆ ಆಗ ಆಶ್ವರ್ಯ ಆಗಿತ್ತು ಅಷ್ಟರೊಳಗೇ ಅಂದಿನ ಶಾಸಕ ಈಶ್ವರಪ್ಪ ,ಮತ್ತು ಕೆಲವು ವ್ಯಕ್ತಿಗಳ ಪ್ರಭಾವ ನಮ್ಮ ಸಂಪಾದಕರ ಮನಸ್ಸು ಕರಗಿಸಿತ್ತು. ಹೀಗಾಗಿ ಪ್ರಕರಣವನ್ನು ಹಿಂಪಡೆಯುವ ಅನಿವಾರ್ಯತೆ ಎದುರಾಗಿತ್ತು. ಆಗ ಹಾಯ್ ಬೆಂಗಳೂರ್ ಪತ್ರಿಕೆ ಸಂಪಾದಕರಾದ ರವಿಬೆಳಗರೆಯವರು ಮೊದಲ ಬಾರಿ ನನಗೆ ಕಾಲ್ ಮಾಡಿದ್ದರು. ದೂರನ್ನು ಹಿಂಪಡೆಯಬೇಡ ಎಂದಿದ್ದರು. ನಾನಿದ್ದೇನೆ ಎಂದು ದೈರ್ಯ ಹೇಳಿದ್ದರು.ಆಗ ನಾನಿನ್ನೂ ಮಾಧ್ಯಮಕ್ಕೆ ಹೊಸಬ ಭಯ ಮತ್ತು ವೃತ್ತಿಯ ಪ್ರಶ್ನೆ ಎರಡೂ ಕಾಡುತಿತ್ತು.
ಇನ್ನು ಕೊನೆಗೆ ಸಂಪಾದಕ ಮಾತಿನಂತೆ ದೂರು ಹಿಂಪಡೆದೆ. ಠಾಣೆಯಲ್ಲಿ ದುನಿಯ ವಿಜಿ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದರು. ಇನ್ನು ವಿಜಿ ಮಾಡಿದ ಕೆಲಸಕ್ಕೆ ಶಿವಮೊಗ್ಗ ದಲ್ಲಿ ಆತನ ಸಿನಿಮಾ ವನ್ನು ಬ್ಯಾನ್ ಮಾಡಿ ಬೆಂಬಲ ನೀಡಿದ್ದರು. ಚಿತ್ರ ಮಂದಿರ ಒಂದು ದಿನ ಬಂದ್ ಆಗಿತ್ತು.
ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳು ಪ್ರತಿಭಟನೆ ಮಾಡಿದ್ದರು. ಆದರೂ ಆತ ಕೇಳಿದ ಕ್ಷಮೆಯಿಂದ ಹಾಗೂ ಸಂಪಾದಕರ ಮಾತಿನಿಂದ ಆ ಪ್ರಕರಣ ಅಲ್ಲಿಯೇ ಮುಗಿದುಹೋಯ್ತು .
ಕೊನೆಗೆ ದುನಿಯಾ ವಿಜಿಗೆ ಆದ ಡ್ಯಾಮೇಜ್ ಸರಿಪಡಿಸಲು ಸುವರ್ಣ ವಾಹಿನಿಯಲ್ಲಿ ಆತನ ವಿಶೇಷ ಕಾರ್ಯಕ್ರಮ ಮಾಡಿದರು. ಎರಡು ಸಿನಿಮಾಗಳ ಹಕ್ಕು ಪಡೆದರು. ನಾನು ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಸುದ್ದಿಯಾದೆ.
ಇದರ ಫಲ ಕೊನೆಗೆ ಆಗಿದ್ದೇನೆಂದರೆ ದುನಿಯ ವಿಜಿ ಈ ಘಟನೆ ಆದ ನಂತರ ಗಂಡ ಹೆಂಡತಿಯ ನಡುವೆ ಬಿರುಕು ಮೂಡಿತು. ಇನ್ನು ಈಶ್ವರಪ್ಪನವರು ಚುನಾವಣೆ ಸಂದರ್ಭದಲ್ಲಿ ಹಣ ಹಂಚಿದ ವಿಡಿಯೋ ವನ್ನು ನಾನು ಮಾಡಿದ ಪರಿಣಾಮ ಆಗ ಆದ ಸುದ್ದಿ ಅವರ ಸೋಲಿನ ಕಾರಣದಲ್ಲಿ ಇವು ಸೇರಿತು. ಸುವರ್ಣ ನ್ಯೂಸ್ ಸಂಪಾದಕರಾದ ಶಶಿಧರ್ ಭಟ್ ಸಹ ವಾಹಿನಿಯಿಂದ ಹೊರಹೋದರು. ನಾನು ಶಿವಮೊಗ್ಗ ದಿಂದ ಹಾಸನಕ್ಕೆ ವರ್ಗಾವಣೆಗೊಂಡೆ!
ಕೊನೆಗೆ ವೃತ್ತಿ ಬದಲಾಯಿತು. ಹಾಸನದಲ್ಲಿ ಒಂದು ವರ್ಷ ಕೆಲಸ ಮಾಡಿದೆ. ಕೆಲಸಕ್ಕೆ ಉತ್ತಮ ಬೆಂಬಲ ಸಿಕ್ಕಿತು. ಉತ್ತಮ ಅವಕಾಶ ಸಿಕ್ಕ ಕಾರಣ ದೆಹಲಿಗೆ ಸೇರಿದ ನಾನು ಅಲ್ಲಿಯೇ ಐದು ವರ್ಷ ಕೆಲಸ ಮಾಡಿದೆ. ಆ ವೇಳೆ ದುನಿಯ ವಿಜಿ ತನ್ನ ಮಕ್ಕಳೊಂದಿಗೆ ದೆಹಲಿಗೆ ಬಂದಿದ್ದರು. ಕೊನೆಗೂ ನನ್ನ ಗುರುತಿಸಿ ಈ ಹಿಂದೆ ಆದ ಘಟನೆಗೆ ಮತ್ತೊಮ್ಮೆ ಕ್ಷಮೆ ಕೇಳಿದ್ದರು. ಅವರ ಚಿಕ್ಕ ಮಕ್ಕಳನ್ನು ಆಗ ನೋಡಿ ಮನಸ್ಸಿಗೆ ನೋವು ತರಿಸಿತ್ತು.ಆದರೇ ಕಾಲ ಬದಲಾಗುತ್ತಾ ಬದಲಾವಣೆ ಅವರ ಜೀವನದಲ್ಲಿ ತಂದಿದೆ. ನಾನು ಕೂಡ ದೆಹಲಿಯಿಂದ ಪಬ್ಲಿಕ್ ಟಿವಿಗೆ ವರದಿಗಾರನಾಗಿ ಕಾರವಾರ ಸೇರಿದೆ.
ನನಗನಿಸಿದ್ದು ಇಷ್ಟೇ..
ಯಾರು ಏನೇ ಮಾಡಲಿ ಅದರ ಫಲ ಅನುಭವಿಸಲೇ ಬೇಕು. ನ್ಯಾಯಾಲಯದ ಶಿಕ್ಷೆಯಿಂದ ತಪ್ಪಿಸಿಕೊಂಡರೂ ಕಾಲದ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದು.
– ನವೀನ್ ಸಾಗರ್
Discussion about this post