`ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲಸಿನ ಬೆಳೆ ವ್ಯಾಪಕವಾಗಿದ್ದು, ಅದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ಕಾರವಾರದಲ್ಲಿ ಸಭೆ ನಡೆಸಿದ ಅವರು `ಹಲಸು ಬೆಳೆಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡದ ಕಾರಣ ರೈತರಿಗೆ ಆದಾಯ ಸಿಗುತ್ತಿಲ್ಲ. ಅತ್ಯಧಿಕ ಪೌಷ್ಠಿಕಾಂಶಹೊoದಿದ ಹಲಸನ್ನು ಮೌಲ್ಯವರ್ಧನೆ ಮಾಡಬೇಕು. ಹಲಸಿನಿಂದ ತಯರಿಸುವ ಆಹಾರ ಪದಾರ್ಥಗಳ ಕೇಂದ್ರ ಸ್ಥಾಪಿಸಿ ಉದ್ಯೋಗ ಸೃಷ್ಠಿಸಬೇಕು. ಈ ಬಗ್ಗೆ ರೈತರ ಮನವೊಲೈಕೆ ಜೊತೆ ಸಂಶೋಧನೆಗಳು ಸಹ ನಡೆಯಬೇಕು. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಕುರಿತಂತೆ ಅಧಿಕಾರಿಗಳು ಆಸಕ್ತಿವಹಿಸಬೇಕು’ ಎಂದು ಕಾಗೇರಿ ಹೇಳಿದ್ದಾರೆ.
ಕೇಂದ್ರದ ಕೃಷಿ ಯಾಂತ್ರೀಕರಣ ಉಪ ಆಭಿಯಾನ ಯೋಜನೆಯಡಿ ಜಿಲ್ಲೆಯ ಕೃಷಿಕರಿಗೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ಜಿಲ್ಲೆಯಲ್ಲಿ ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ದೇಶನ ನೀಡಿದರು. `ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಚಿಕ್ಕ ಹಿಡುವಳಿಗಳು ಹೆಚ್ಚಿರುವುದರಿಂದ ಕೃಷಿಯಿಂದ ರೈತರಿಗೆ ಲಾಭದಾಯವಾಗುವ ನಿಟ್ಟಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಬದ್ದತೆಯಿಂದ ಕಾರ್ಯ ನಿರ್ವಹಿಸಿ’ ಎಂದು ಕರೆ ನೀಡಿದರು.