ನಿನ್ನೆ ಮೊನ್ನೆಯವರೆಗೂ ಶಿರಸಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೈಪ್ ಕದ್ದವರು ಯಾರು? ಎಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದೀಗ ನಗರಸಭೆ ಅಧಿಕಾರಿಯೊಬ್ಬರು ಆತನನ್ನು ಪತ್ತೆ ಹೆಚ್ಚಿ ಹೆಸರುಸಹಿತವಾಗಿ ಪೊಲೀಸ್ ದೂರು ನೀಡಿದ್ದಾರೆ!
ಕಳೆದ ಮೂರು ವರ್ಷಗಳಿಂದ ಶಿರಸಿ ನಗರಸಭೆಯಲ್ಲಿ ಕಿರಿಯ ಅಭಿಯಂತರಾಗಿರುವ ಸುಫಿಯಾನ್ ಅಹಮದ್ ಬ್ಯಾರಿ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. `ಫೆ 20ರಂದು ಮಧ್ಯಾಹ್ನ 1.30ಕ್ಕೆ ಕೆಂಗ್ರೆ ನೀರು ಸರಬರಾಜು ಕೇಂದ್ರಕ್ಕೆ ತೆರಳಿದಾಗ ನೀರು ಸರಬರಾಜಿಗೆ ಅಳವಡಿಸಿದ್ದ ಕಾಸ್ಟ ಐರನ್ ಪೈಪುಗಳು ಅಲ್ಲಿಯೇ ಇದ್ದವು. ಫೆ 26ರಂದು ಮತ್ತೆ ಅಲ್ಲಿ ಹೋಗಿ ನೋಡಿದಾಗ ಅವು ಕಾಣೆಯಾಗಿದ್ದವು’ ಎಂದವರು ಪೊಲೀಸರ ಮುಂದೆ ವಿವರಿಸಿದ್ದಾರೆ.
`ಆ ದಿನ ಮಣ್ಣು ಅಗೆದು ಪೈಪು ಕದ್ದಿರುವುದು ಕಾಣಿಸಿತು. ಆದರೆ, ಅಲ್ಲಿ ಯಾವುದೇ ವ್ಯಕ್ತಿಗಳು ಇರಲಿಲ್ಲ. ಫೆ 27ರಂದು ಹಿರಿಯ ಅಧಿಕಾರಿಗಳ ಜೊತೆ ಮತ್ತೆ ಕೇಂಗ್ರೆ ನೀರು ಸರಬರಾಜು ಪ್ರದೇಶಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದಾಗ ಸುಮಾರು 700 ಮೀ ಪೈಪು ಕಳ್ಳತನವಾಗಿರುವುದು ಖಚಿತವಾಯಿತು. ಹುತ್ಕಾರ್ ಮದ್ಯಂತರ ಘಟಕದವರೆಗಿನ ಪೈಪುಗಳು ಕಳ್ಳತನವಾಗಿದ್ದವು’ ಎಂದವರು ದೂರಿನಲ್ಲಿ ಹೇಳಿಕೊಂಡಿದ್ದಾರೆ. `ಈವರೆಗೆ 20 ಅಡಿ ಉದ್ದ, 1 ಅಡಿ ವ್ಯಾಸದ ಒಟ್ಟು 116 ಪೈಪುಗಳು ಕಳ್ಳತನವಾಗಿದೆ. ಕಳ್ಳತನವಾದ ಪೈಪಿನ ಮೊತ್ತ ಅಂದಾಜು 2118624 ರೂಪಾಯಿಗಳಿವೆ. ಯಾವುದೇ ಟೆಂಡರ್ ಆಗದೇ, ಅನುಮತಿಯನ್ನು ಪಡೆಯದೇ ಈ ಪೈಪುಗಳನ್ನು ಕಳ್ಳತನ ಮಾಡಲಾಗಿದೆ’ ಎಂದವರು ದೂರಿದ್ದಾರೆ.
ಇನ್ನೂ, `ಶಿರಸಿ ನಗರದಲ್ಲಿ ಹಲವು ಕಡೆ ಈ ಬಗೆಯ ಪೈಪುಗಳನ್ನು ಅಳವಡಿಸಲಾಗಿದೆ. ಕಳೆದ ವರ್ಷ ಶಿಕಾರಿಪುರದ ಗುಜುರಿ ಗುತ್ತಿಗೆದಾರ ಜಕ್ರಿಯಾ ಸಯ್ಯದ್ ಅವರಿಗೆ ಶಿರಸಿ ನಗರ ವ್ಯಾಪ್ತಿಯ ಪೈಪ್ ಒಯ್ಯುವ ಟೆಂಡರ್ ಆಗಿತ್ತು. ಸದ್ಯ ಕಳ್ಳತನವಾಗಿರುವ ಪೈಪುಗಳನ್ನು ತನಗೆ ಕೊಡುವಂತೆ ಜಿಕ್ರಿಯಾ ಸಯ್ಯದ್ ಪದೇ ಪದೇ ಒತ್ತಡ ಹಾಕಿದ್ದರು. ಟೆಂಡರ್ ಇಲ್ಲದೇ ತೆಗೆದುಕೊಂಡು ಹೋಗುವ ಬಗ್ಗೆಯೂ ಹೇಳಿದ್ದರು. ಹೀಗಾಗಿ ಜಿಕ್ರಿಯಾ ಸಯ್ಯದ್ ಅವರೇ ತಮ್ಮ ಕೆಲಸಗಾರರ ಮೂಲಕ ಈ ಪೈಪ್ ಕದ್ದಿರುವ ಸಾಧ್ಯತೆ ಹೆಚ್ಚಿದೆ’ ಎಂದು ಸುಫಿಯಾನ್ ಅಹಮದ್ ಬ್ಯಾರಿ ಪೊಲೀಸ್ ದೂರು ನೀಡಿದ್ದಾರೆ. ಸರ್ಕಾರಿ ಸ್ವತ್ತು ಕದ್ದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.





