ಎರಡು ವರ್ಷದ ಹಿಂದೆ ಐದು ಲಕ್ಷ ರೂ ಸಾಲ ಮಾಡಿಕೊಂಡಿದ್ದ ಹಳಿಯಾಳದ ಅಕ್ಕಸಾಲಿಗ ನಾರಾಯಣ ಗೌಡ ಕಳೆದ ವರ್ಷ ತಮ್ಮ 1.30 ಗುಂಟೆ ಭೂಮಿಯನ್ನು ಸಾಲ ಕೊಟ್ಟವರಿಗೆ ಬರೆದುಕೊಟ್ಟಿದ್ದಾರೆ. ಸಾಲ ನೀಡಿದವರ ಭಯದಲ್ಲಿದ್ದ ಅವರು ಇದೀಗ `ತಮ್ಮ ಭೂಮಿಯನ್ನು ಅನ್ಯಾಯದ ಮಾರ್ಗದಿಂದ ಕಸಿದುಕೊಳ್ಳಲಾಗಿದೆ’ ಎಂದು ಪೊಲೀಸ್ ದೂರು ನೀಡಿದ್ದಾರೆ.
ಹಳಿಯಾಳದ ಬಾಣಸಗೇರಿಯ ನಾರಾಯಣ ಗೌಡ ಅವರು ಬೆಳಗಾವಿಯಲ್ಲಿ ವಾಸವಾಗಿದ್ದಾರೆ. ಅವರು ಹಳಿಯಾಳದ ಬಿಕೆ ಹಳ್ಳಿಯ ಸ್ವರಾಜ ಯಲ್ಲಾರಿ ಎಂಬಾತರ ಬಳಿ 5 ಲಕ್ಷ ರೂ ಸಾಲ ಪಡೆದಿದ್ದರು. ಆದರೆ, ಆ ಸಾಲವನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಬಡ್ಡಿಯನ್ನು ಸಹ ಪಾವತಿಸಿರಲಿಲ್ಲ. ಇದರಿಂದ ಸಿಟ್ಟಾದ ಸ್ವರಾಜ ಯಲ್ಲಾರಿ ನಾರಾಯಣ ಗೌಡ ವಿರುದ್ಧ ಕಿಡಿಕಾರಿದ್ದರು.
2024ರ ಏಪ್ರಿಲ್ 11ರಂದು ನಾರಾಯಣ ಗೌಡ ಅವರ ಮನೆಗೆ ಬಂದು ಕೂಗಾಡಿದ ಸ್ವರಾಜ್ ಯಲ್ಲಾರಿ `ಅಸಲು ಕೊಟ್ಟಿಲ್ಲ. ಬಡ್ಡಿಯೂ ಕೊಟ್ಟಿಲ್ಲ. ಹೀಗಾಗಿ ನಿನ್ನ ಭೂಮಿ ನನಗೆ ಕೊಡು’ ಎಂದು ದಬಾಯಿಸಿದ್ದರು. `ಕೂಡಲೇ ಹಣ ಪಾವತಿ ಮಾಡು. ಇಲ್ಲವಾದಲ್ಲಿ ಭೂಮಿ ಬರೆದುಕೊಡು’ ಎಂದು ಒತ್ತಾಯಿಸಿದ್ದರು. ಅದಾದ ನಂತರ ಹಳಿಯಾಳ ಉಪನೊಂದಣಾಧಿಕಾರಿ ಕಚೇರಿಗೆ ಕರೆದೊಯ್ದು ಗುತ್ತೆಬೈಲ್ ಗ್ರಾಮದ ಸವೇ ನಂ 1ರ ಹಿಸಾ 4ರಲ್ಲಿನ 1.33 ಎಕರೆ ಭೂಮಿಯನ್ನು ಬರೆಯಿಸಿಕೊಂಡಿದ್ದರು.
ನಾರಾಯಣ ಗೌಡ ಅವರ ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಸಹಿ ಪಡೆದಿದ್ದರು. ಸ್ವರಾಜಿ ಯಲ್ಲಾರಿ ಅವರ ಭಯದಿಂದ ಮೌನವಾಗಿದ್ದ ನಾರಾಯಣ ಗೌಡ ಈ ಬಗ್ಗೆ ಆಪ್ತರಲ್ಲಿ ಹೇಳಿಕೊಂಡಿದ್ದರು. ಅವರ ಸಲಹೆ ಮೇರೆಗೆ ಇದೀಗ ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ತಮಗಾದ ಅನ್ಯಾಯದ ಬಗ್ಗೆ ದೂರು ನೀಡಿದ್ದಾರೆ.