ದಾಂಡೇಲಿಯ ಕೆಎಲ್‌ಇ ನರ್ಸಿಂಗ್ ಕಾಲೇಜು ಪ್ರಾಚಾರ್ಯ ವಿನಾಯಕ ಪಾಟೀಲ ಅವರ ಕಾರಿಗೆ ಟಿಪ್ಪರ್ ಚಾಲಕನೊಬ್ಬ ತನ್ನ ವಾಹನ ಗುದ್ದಿದ್ದಾನೆ. ಈ ಅಪಘಾತದಲ್ಲಿ ಕಾರು ಜಖಂ ಆಗಿದ್ದು, ವಿನಾಯಕ ಪಾಟೀಲ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ಹನುಮಾನ ನಗರದ ವಿನಾಯಕ ಪಾಟೀಲ್ ಅವರು ಫೆ 4ರ ಮಧ್ಯಾಹ್ನ ಕಾಲೇಜಿನಿಂದ ಹೊರಟಿದ್ದರು. ಅವರು ಬೆಳಗಾವಿಗೆ ತಲುಪುವುದಕ್ಕಾಗಿ ಅರಣ್ಯದ ಹಾದಿಯಲ್ಲಿ ಕಾರು ಓಡಿಸುತ್ತಿದ್ದರು. ಇದೇ ವೇಳೆ ದಾಂಡೇಲಿ ಬೈಲಪಾರದ ಬಸಪ್ಪ ಉಪ್ಪಾರ್ ವೇಗವಾಗಿ ಟಿಪ್ಪರ್ ಓಡಿಸಿಕೊಂಡು ಬರುತ್ತಿದ್ದರು. ಜಗಲಪೇಟೆ ತಿರುವಿನ ಸಿಗರಗಾವಿನ ಅರಣ್ಯ ಪ್ರದೇಶದಲ್ಲಿ ಕಾರಿಗೆ ಟಿಪ್ಪರ್ ಗುದ್ದಿತು.
ಟಿಪ್ಪರ್ ವೇಗವಾಗಿ ಬರುವುದನ್ನು ನೋಡಿದ ವಿನಾಯಕ ಪಾಟೀಲ ಅವರು ಕಾರನ್ನು ತೀರಾ ಎಡಕ್ಕೆ ತೆಗೆದುಕೊಂಡಿದ್ದರು. ಅದಾಗಿಯೂ ಬಸಪ್ಪ ಉಪ್ಪಾರ್ ಕಾರಿನ ಬಲಗಡೆ ವೇಗವಾಗಿ ಟಿಪ್ಪರ್ ಗುದ್ದಿದರು. ಪರಿಣಾಮ ಕಾರು ಜಖಂ ಆಗಿದೆ. ಪ್ರಾಚಾರ್ಯ ವಿನಾಯಕ ಪಾಟೀಲ್ ಅವರಿಗೆ ಯಾವುದೇ ಗಾಯವಾಗಿಲ್ಲ. ಈ ಬಗ್ಗೆ ವಿನಾಯಕ ಪಾಟೀಲ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.