ಮುರುಡೇಶ್ವರ ಬಳಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಿಂದಿನಿoದ ಕ್ರೇನ್ ಗುದ್ದಿದೆ. ಪರಿಣಾಮ ಮಂಜಪ್ಪ ನಾಯ್ಕ ಎಂಬಾತರು ಸಾವನಪ್ಪಿದ್ದಾರೆ.
ಅಂಕೋಲಾ ಮಾದನಗೇರಿ ಬಳಿಯ ವಡಗಾರದ ಚಂದ್ರಹಾಸ ಮರಾಠಿ ಫೆ 4ರ ಸಂಜೆ ಕ್ರೇನ್ ಓಡಿಸುತ್ತಿದ್ದರು. ಮುರುಡೇಶ್ವರದ ಬಸ್ತಿ ರೈಲ್ವೆ ಸೇತುವೆ ಬಳಿ ನಡೆದು ಹೋಗುತ್ತಿದ್ದ ಭಟ್ಕಳ ಬಸ್ತಿ ಕಾಯ್ಕಿಣಿ ಬಳಿಯ ಎಣ್ಣೆಬೋಳೆ ಮಂಜಪ್ಪ ನಾಯ್ಕ (80) ಅವರಿಗೆ ಹಿಂದಿನಿoದ ಆ ಕ್ರೇನ್ ಡಿಕ್ಕಿಯಾಯಿತು. ಪರಿಣಾಮ ಮಂಜಪ್ಪ ನಾಯ್ಕ ಅವರ ತೊಡೆಗೆ ಭಾರೀ ಪ್ರಮಾಣದಲ್ಲಿ ಗಾಯವಾಯಿತು.
ಮಂಜಪ್ಪ ನಾಯ್ಕ ಅವರನ್ನು ಮುರುಡೇಶ್ವರ ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅದಾದ ನಂತರ ಅವರನ್ನು ಮಣಿಪಾಲ ಕಸ್ತೂರಿ ಬಾ ಆಸ್ಪತ್ರೆಗೆ ಸೇರಿಸುವ ಪ್ರಯತ್ನವೂ ನಡೆಯಿತು. ಆದರೆ, ರಾತ್ರಿ 8.30ರ ಸುಮಾರಿಗೆ ಮಂಜಪ್ಪ ನಾಯ್ಕ ನೋವು ಸಹಿಸಿಕೊಳ್ಳಲಾಗದೇ ಸಾವನಪ್ಪಿದರು.
ಈ ಸಾವಿಗೆ ಕಾರಣನಾದ ಕ್ರೇನ್ ಚಾಲಕ ಚಂದ್ರಹಾಸ ಮರಾಠಿ ವಿರುದ್ಧ ಬಸ್ತಿ ಕಾಯ್ಕಿಣಿ ಬಳಿಯ ಎಣ್ಣೆಬೋಳೆ ಮಾಧವ ನಾಯ್ಕರು ಮುರುಡೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.