ಹೊಟ್ಟೆನೋವು ಎಂದು ಯಲ್ಲಾಪುರ ಆಸ್ಪತ್ರೆಗೆ ಬಂದಿದ್ದ 10ನೇ ತರಗತಿ ವಿದ್ಯಾರ್ಥಿನಿಗೆ ಹೆಣ್ಣು ಮಗು ಹುಟ್ಟಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆಕೆಯ ಅಣ್ಣನಿಂದಲೇ ಗರ್ಭ ಧರಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಯಲ್ಲಾಪುರ ತಾಲೂಕಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕೆಲ ತಿಂಗಳ ಹಿಂದೆ ಮುಂಡಗೋಡಿನ ಸಂಬoಧಿಕರ ಮನೆಗೆ ಹೋಗಿದ್ದರು. ಆ ವೇಳೆ, ಗಿರೀಶ (19) ಎಂಬಾತ ಆ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ವಿಷಯವನ್ನು ಹೊರಗಡೆ ಹೇಳಿದರೆ ಜೀವ ತೆಗೆಯುವುದಾಗಿಯೂ ಆತ ಬೆದರಿಸಿದ್ದ. ಹೀಗಾಗಿ ಆ ವಿದ್ಯಾರ್ಥಿನಿ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದರೂ ಅದನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ಎರಡು ತಿಂಗಳ ಹಿಂದೆ ಆರೋಗ್ಯ ಇಲಾಖೆಯವರು ಶಾಲಾ-ಕಾಲೇಜು ಭೇಟಿ ನಡೆಸಿದಾಗಲೂ ವಿದ್ಯಾರ್ಥಿನಿ ಸ್ಪಷ್ಟ ಮಾಹಿತಿ ಕೊಟ್ಟಿರಲಿಲ್ಲ. ಬಡಕಲು ಶರೀರದ ವಿದ್ಯಾರ್ಥಿನಿ ಕೊಂಚ ದಪ್ಪವಾಗಿದ್ದು ಬಿಟ್ಟರೆ ಆಕೆ ಗರ್ಭಿಣಿ ಎನ್ನುವುದಕ್ಕೆ ಬೇರೆ ಯಾವುದೇ ಮುನ್ಸೂಚನೆಯೂ ಸಿಕ್ಕಿರಲಿಲ್ಲ. ಮಾರ್ಚ 4ರಂದು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಬರೆದಿದ್ದು, ಮಾರ್ಚ 5ರಂದು ಹೊಟ್ಟೆನೋವಿನ ಕಾರಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾದರು.
ಈ ವೇಳೆ ಅವರಿಗೆ ಹೆಣ್ಣು ಮಗು ಜನಿಸಿದೆ. ವಿಚಾರಣೆ ನಡೆಸಿದಾಗ ಸಹೋದರ ಸಂಬoಧಿ ನಡೆಸಿದ ನೀಚ ಕೃತ್ಯ ಅರಿವಿಗೆ ಬಂದಿದೆ. ಮುಂಡಗೋಡ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ. ಇನ್ನೂ, ಅವಧಿಪೂರ್ವ ಮಗು ಜನನವಾಗಿದ್ದರಿಂದ ಮಗುವಿನ ಆರೋಗ್ಯವೂ ಸರಿಯಾಗಿಲ್ಲ. ಮಗು ಕೇವಲ 1.7 ಕೆಜಿ ತೂಕವಿದ್ದು, ತಾಯಿಯೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕಡಿಮೆ ತೂಕ, ಅನಾರೋಗ್ಯದ ಹಿನ್ನಲೆ ತಾಯಿ-ಮಗುವನ್ನು ಯಲ್ಲಾಪುರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಇಬ್ಬರಿಗೂ ಚಿಕಿತ್ಸೆ ಮುಂದುವರೆದಿದೆ.