ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಗುಮುಖದ ಸೇವೆ ನೀಡುತ್ತಿದ್ದ ಜಿ ಎಂ ಭಟ್ಟ ಮೊನ್ನೆ ನಿವೃತ್ತರಾಗಿದ್ದಾರೆ. ನಿವೃತ್ತಿ ದಿನ ತಮಗೆ ಬಂದ ಉಡುಗರೆಯ ಕಾಣಿಕೆಯನ್ನು ಅವರು ಗೋಶಾಲೆಗೆ ನೀಡಿದ್ದಾರೆ.
ಅವರ ಈ ಕಾರ್ಯದಿಂದ ಪ್ರೇರಣೆಯಾದ ಆಸ್ಪತ್ರೆ ಸಿಬ್ಬಂದಿ ಸಹ ಉದಾರ ಮನಸ್ಸಿನಿಂದ ಗೋಶಾಲೆಗೆ ನೆರವು ನೀಡಿದ್ದು, ಈ ನಿವೃತ್ತಿ ಸಮಾರಂಭದ ಅಂಗವಾಗಿ ಕರಡೊಳ್ಳಿಯ ಗೋವರ್ಧನ ಗೋಶಾಲೆಗೆ 45 ಸಾವಿರ ರೂ ಸಂದಾಯವಾಗಿದೆ. ಈ ಪುಣ್ಯ ಕಾರ್ಯದ ಬಗ್ಗೆ ಜಿ ಎಂ ಭಟ್ಟ ಅವರು ಈವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ!
ಜಿ ಎಂ ಭಟ್ಟ ಅವರು ಕಳೆದ 28 ವರ್ಷಗಳಿಂದ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷ-ಕಿರಣ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದರು. ತಮ್ಮ ಈ ಕೆಲಸದೊಂದಿಗೆ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೂ ಅವರು ಅಗತ್ಯ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಗೆ ಬಂದ ಬಹುತೇಕ ಪರಿಚಯಸ್ಥರು ಅವರನ್ನು ಮಾತನಾಡಿಸದೇ ಹೋಗುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆ ವೈದ್ಯರು-ಸಿಬ್ಬಂದಿ ಜೊತೆ ರೋಗಿಗಳಿಗೆ ಸಹ ಅವರು ಆಪ್ತರಾಗಿದ್ದರು.
ನಿವೃತ್ತಿಯ ಹಿಂದಿನ ದಿನ ಜಿ ಎಂ ಭಟ್ಟ ಅವರು ಕರಡೊಳ್ಳಿ ಗೋ ಶಾಲೆಗೆ ಫೋನ್ ಮಾಡಿದ್ದರು. `ನಾಳೆ ನನ್ನ ನಿವೃತ್ತಿ ಸಮಾರಂಭವಿದೆ. ನೀವು ನಿಮ್ಮ ಕಾಣಿಕೆ ಸಂಗ್ರಹದ ಹುಂಡಿ ತನ್ನಿ’ ಎಂದಷ್ಟೇ ಹೇಳಿದ್ದರು. ನಿವೃತ್ತಿಯ ದಿನ ಅನೇಕರು ಆಗಮಿಸಿ ಜಿ ಎಂ ಭಟ್ಟ ಅವರಿಗೆ ಉಡುಗರೆ ನೀಡಿದರು. ಅನೇಕರು ಪ್ರೀತಿಯಿಂದ ಹಣವನ್ನು ನೀಡಿದ್ದರು. ಅಲ್ಲಿ ಸಂಗ್ರಹವಾದ ಹಣಕ್ಕೆ ತಾವು ಒಂದಷ್ಟು ಸೇರಿಸಿ 19 ಸಾವಿರ ರೂಪಾಯಿಗಳನ್ನು ಜಿ ಎಂ ಭಟ್ಟ ಅವರು ಗೋಶಾಲೆಗೆ ನೀಡಿದರು. ಇದರಿಂದ ಪ್ರೇರಣೆಗೊಂಡ ಆಸ್ಪತ್ರೆ ಸಿಬ್ಬಂದಿ ಸಹ ಗೋಶಾಲೆಗೆ ನೆರವಾದರು. ಜಿ ಎಂ ಭಟ್ಟ ಅವರ ನಿವೃತ್ತಿ ದಿನದ ಪರಿಣಾಮ ಗೋಶಾಲೆಗೆ ಒಟ್ಟು 45 ಸಾವಿರ ರೂ ಸಂಗ್ರಹವಾಯಿತು.
ಈ ಕಾರ್ಯಕ್ಕಾಗಿ ಜಿ ಎಂ ಭಟ್ಟ ಅವರಿಗೆ ಪ್ರಚಾರ ಪಡೆಯುವ ಮನಸ್ಸಿರಲಿಲ್ಲ. ಹೀಗಾಗಿ `ಈ ವಿಷಯದ ಬಗ್ಗೆ ಎಲ್ಲಿಯೂ ಹೇಳುವ ಹಾಗಿಲ್ಲ’ ಎಂದು ಅವರು ಗೋಶಾಲೆಯವರಿಗೂ ತಾಕೀತು ಮಾಡಿದ್ದರು. ಅದಾಗಿಯೂ ಶಿರಸಿಯ ಆಯುರ್ವೇದಿಕ್ ವೈದ್ಯ ಡಾ ರವಿಕಿರಣ ಪಟವರ್ಧನ ಅವರಿಗೆ ವಿಷಯ ಗೊತ್ತಾಗಿದ್ದರಿಂದ ಜಿ ಎಂ ಭಟ್ಟ ಅವರ ಮಾದರಿ ಕಾರ್ಯದ ಬಗ್ಗೆ ಅವರು ಎಲ್ಲರಿಗೂ ಸುದ್ದಿ ಮುಟ್ಟಿಸಿದರು!
`ಪ್ರತಿಯೊಬ್ಬ ಸರ್ಕಾರಿ ನೌಕರರು ನಿವೃತ್ತರಾಗುವುದು-ಸಮಾರಂಭ ನಡೆಸುವುದು ಸಾಮಾನ್ಯ. ಅದರಲ್ಲಿಯೂ ಜಿ ಎಂ ಭಟ್ಟ ಅವರು ನಿವೃತ್ತಿ ದಿನ ಗೋಶಾಲೆಗೆ ಕಾಣಿಕೆ ಅರ್ಪಿಸಿರುವುದು ಮಾದರಿ’ ಎಂದು ಅಲ್ಲಿದ್ದ ಸ್ವಯಂ ಸೇವಕರು ಮಾತನಾಡಿಕೊಂಡರು. `ಗೋಮಾತೆಯ ಆಶೀರ್ವಾದ ಎಲ್ಲರ ಮೇಲೆಯೂ ಇರಲಿ’ ಎಂದು ಹಾರೈಸಿ ಅವರು ಅಲ್ಲಿಂದ ನಿರ್ಗಮಿಸಿದರು.