ಭಟ್ಕಳದಲ್ಲಿ ನಡೆದ ದಾಯಾದಿಗಳ ಕಲಹ ಮನೆಯನ್ನು ಬ್ಲಾಸ್ಟ್ ಮಾಡುವ ಬೆದರಿಕೆಯವರೆಗೆ ಹೋಗಿದೆ. 35 ಲಕ್ಷ ರೂ ವೆಚ್ಚದಲ್ಲಿ ನವೀಕರಿಸಲಾದ ಮನೆಯನ್ನು ಬ್ಲಾಸ್ಟ್ ಮಾಡುವುದಾಗಿ ಒಡಹುಟ್ಟಿದವರೇ ಹೇಳಿದ್ದರಿಂದ ಮನೆ ರಕ್ಷಣೆಗಾಗಿ ಮಹ್ಮದ್ ಫೈಜಾನ್ ಪೊಲೀಸರ ಮೊರೆ ಹೋಗಿದ್ದಾರೆ!
ಭಟ್ಕಳದ ಸೂಸಗಡಿ ಹೋಬಳಿಯ ಪಾತಿಮಾ ಕೌಸರ್ ಅವರ ಜಾಗದಲ್ಲಿ ಅವರ ಪತಿ ಮಹ್ಮದ್ ಅಶ್ರಫ್ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಮಹ್ಮದ್ ಅಶ್ರಫ್ ಅವರ ಸಾವಿನ ನಂತರ ಅವರ ಮಗ ಮಹ್ಮದ್ ಫೈಜಾನ್ 35 ಲಕ್ಷ ರೂ ವೆಚ್ಚ ಮಾಡಿ ಆ ಮನೆಯ ನವೀಕರಣ ಕೆಲಸ ಮಾಡಿಕೊಂಡಿದ್ದರು. ತಾಯಿ ಪಾತಿಮಾ ಕೌಸರ್ ಹಾಗೂ ಸಹೋದರ-ಸಹೋದರಿಯರೆಲ್ಲರೂ ಸೇರಿ 2024ರ ಅಕ್ಟೊಬರ್ 10ರಂದು ಆ ಮನೆಯ ಹಕ್ಕನ್ನು ಮಹ್ಮದ್ ಫೈಜಾನ್ ಅವರಿಗೆ ಬಿಟ್ಟು ಕೊಟ್ಟಿದ್ದರು. ಇದೇ ಆಧಾರದಲ್ಲಿ ಪುರಸಭೆಯಿಂದ ನಮೂನೆ 3 ಸಹ ಸಿಕ್ಕಿದ್ದು, ಮಹ್ಮದ್ ಫೈಜಾನ್ ಅಲ್ಲಿ ನೆಮ್ಮದಿಯಿಂದ ವಾಸವಾಗಿದ್ದರು.
ಆದರೆ, ಮಾರ್ಚ 5ರಂದು ಸುಲ್ತಾನ್ ಸ್ಟಿಟ್’ನಲ್ಲಿ ವಾಸಿಸುವ ಮಹ್ಮದ್ ಫೈಜಾನ್ ಅವರ ಸಹೋದರ ಮಹ್ಮದ್ ರಿಯಾನ್ ಹಾಗೂ ಮುಗ್ದಂ ಕಾಲೋನಿಯಲ್ಲಿ ವಾಸಿಸುವ ಸಹೋದರಿ ಖತೀಜಾ ಇಜಾ ಜೊತೆ ಅವರ ತಾಯಿ ಪಾತಿಮಾ ಕೌಸರ್ ಅಲ್ಲಿಗೆ ಬಂದರು. ಸ್ನೇಹಿತ ಅಹ್ಮದ್ ಇಬ್ರಾಹಿಂ ಜೊತೆ ನಡೆದು ಹೋಗುತ್ತಿದ್ದ ಮಹ್ಮದ್ ಫೈಜಾನ್ ಅವರನ್ನು ಅಡ್ಡಗಟ್ಟಿದರು. ತಮಗೆ ಹಕ್ಕಿಲ್ಲದ ಮನೆಯಲ್ಲಿ ಭಾಗ ಕೇಳಿದರು. ಇದಕ್ಕೆ ನಿರಾಕರಿಸಿದಾಗ ಮಹ್ಮದ್ ಫೈಜಾನ್ ಮೇಲೆ ಬೈಕ್ ಹತ್ತಿಸುವ ಪ್ರಯತ್ನ ನಡೆಸಿದರು.
`ಮನೆ ಮತ್ತು ಜಾಗ ನಿನಗೆ ಕೊಡುವುದಿಲ್ಲ. ನಿನ್ನ ಕೊಂದು ಬಿಸಾಕುತ್ತೇವೆ’ ಎಂದು ಬೆದರಿಸಿದರು. `ಇಡೀ ಮನೆಯನ್ನು ಬ್ಲಾಸ್ಟ್ ಮಾಡಿ ನಿನ್ನ ಕುಟುಂಬ ನಾಶ ಮಾಡುವೆ’ ಎಂದು ಮಹ್ಮದ್ ರಿಯಾನ್ ಕೂಗಾಡಿದರು. ಇದರಿಂದ ಬೆದರಿದ ಮಹ್ಮದ್ ಫೈಜಾನ್ ಭಟ್ಕಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ತಮ್ಮೊಂದಿಗೆ ಮನೆಗೂ ರಕ್ಷಣೆ ನೀಡುವಂತೆ ಅವರು ಬೇಡಿಕೊಂಡರು.