ಮುಂಡಗೋಡಿನ ಕಾತೂರಿನ ರೈತರು ಗೋವಿನ ಜೋಳ ಹಾಗೂ ಹಲಸಂದಿ ಬೆಳೆದಿದ್ದು, ಬೆಳೆಗೆ ನೀರಿನ ಪೂರೈಕೆ ಸರಿಯಾಗಿಲ್ಲ. ಪದೇ ಪದೇ ವಿದ್ಯುತ್ ಸಮಸ್ಯೆ ಕಾಡುತ್ತಿರುವುದರಿಂದ ಬೆಳೆಗೆ ನೀರು ಬಿಡಲಾಗದೇ ರೈತರು ಕಂಗಾಲಾಗಿದ್ದಾರೆ.
ಕಾತೂರು ಬಳಿಯ ಸಿಂಗನಳ್ಳಿ, ನಾಗನೂರು ಸೇರಿ ಹಲವು ಕಡೆ ವಿದ್ಯುತ್ ಸಮಸ್ಯೆಯಿಂದ ರೈತರು ರೋಸಿ ಹೋಗಿದ್ದಾರೆ. ವಿದ್ಯುತ್ ಪೂರೈಕೆ ಸರಿಯಿಲ್ಲದ ಕಾರಣ ಗದ್ದೆಗಳು ಒಣಗಿವೆ. ಸಮಯಕ್ಕೆ ಸರಿಯಾಗಿ ಹೊಲಕ್ಕೆ ನೀರು ಬಿಡಲು ರೈತರಿಂದ ಸಾಧ್ಯವಾಗುತ್ತಿಲ್ಲ. `ಇನ್ನೂ ಕೆಲ ತಿಂಗಳು ವಿದ್ಯುತ್ ಸರಿಯಾಗಿ ಒದಗಿಸಿದರೆ ಫಸಲು ಕೈಗೆ ಸಿಗುತ್ತಿತ್ತು. ಆದರೆ, ವಿದ್ಯುತ್ ಪೂರೈಕೆ ಸರಿಯಾಗಿಲ್ಲದ ಕಾರಣ ಬೆಳೆಗಳೆಲ್ಲವೂ ಬಿಸಿಲಿಗೆ ಒಣಗುತ್ತಿದೆ’ ಎಂದು ರೈತರು ವಿವರಿಸಿದರು.
`ದಿನಕ್ಕೆ 20 ಸಲ ವಿದ್ಯುತ್ ಕಡಿತವಾಗುತ್ತದೆ. ಒಂದು ತಾಸು ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಅಡಿಕೆ, ಬಾಳೆ, ಜೋಳ, ಹಲಸಂದಿ ಸೇರಿ ಹಲವು ಬೆಳೆಗಳಿಗೆ ಇದರಿಂದ ಸಮಸ್ಯೆಯಾಗಿದೆ. ಹೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಆ ಭಾಗದವರು ಅಳಲು ತೊಡಿಕೊಂಡರು.
`ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಬೆಳೆ ಕೈಗೆ ಸಿಗುವವರೆಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಇಷ್ಟು ದಿನ ಕಷ್ಟಪಟ್ಟು ಬೆಳೆದ ಶ್ರಮ ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.