ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಎಸ್ ಭಟ್ಟ ಲೋಕೇಶ್ವರ ಅವರು ಶಿರಸಿ ಮಾರಿಕಾಂಬೆಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವೇಳೆ ಅವರು ಉತ್ತರ ಕನ್ನಡ ಜಿಲ್ಲೆಯ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಲಕ್ಷ್ಮೀಪ್ರಿಯಾ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಶಿರೂರು ಗುಡ್ಡ ಕುಸಿತ, ಅರಬೈಲ್ ಅಫಘಾತ ಸೇರಿ ಹಲವು ಸಂಕಷ್ಟಕರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರಕೃತಿ ವಿಕೋಪ ಸನ್ನಿವೇಶಗಳಲ್ಲಿಯೂ ಅವರು ಚುರುಕಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಎಲ್ಲಾ ಹಿನ್ನಲೆಯಲ್ಲಿ ಅವರಿಗೆ ದೇವರ ಅನುಗ್ರಹ ಕೋರಿ ಎನ್ ಎಸ್ ಭಟ್ಟ ಲೋಕೇಶ್ವರ ಅವರು ಗುರುವಾರ ಈ ಪೂಜೆ ಸಲ್ಲಿಸಿದರು.
`ಒಬ್ಬ ಮಹಿಳಾ ಐಎಎಸ್ ಅಧಿಕಾರಿಯಾಗಿ ಲಕ್ಷ್ಮೀಪ್ರಿಯಾ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಎಲ್ಲಾ ತಾಲೂಕಿಗೂ ಭೇಟಿ, ಅಧಿಕಾರಿಗಳ ಜೊತೆ ಸಂವಹನ ವಿಷಯದಲ್ಲಿ ಅತ್ಯಂತ ಚುರುಕಿನಿಂದ ಅವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೇವರ ಅನುಗ್ರವಿರಲಿ ಎಂಬ ಕಾರಣಕ್ಕೆ ವಿಶೇಷ ಪೂಜೆ ಸಲ್ಲಿಸಲಾಗಿದೆ’ ಎಂದು ಎನ್ ಎಸ್ ಭಟ್ಟ ಲೋಕೇಶ್ವರ ಅವರು ಪೂಜೆ ನಂತರ ಪ್ರತಿಕ್ರಿಯಿಸಿದರು.
`ಉತ್ತರ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ನಿರ್ವಹಣೆಗಾಗಿ ದೇವರಲ್ಲಿ ಪ್ರಾರ್ಥಿಸಲಾಗಿದೆ’ ಎಂದರು. ಮಾರಿಕಾಂಬಾ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ನಾಯ್ಕ, ದೇಗುಲ ಅಧ್ಯಕ್ಷ ಆರ್ ಜಿ ನಾಯ್ಕ ಅವರು ಈ ವೇಳೆ ಇದ್ದರು.