ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ವಿರುದ್ಧ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್ ರವಿ ಅವರು ಏಕಾಂಗಿಯಾಗಿ ನಡೆಸುತ್ತಿದ್ದ ಪ್ರತಿಭಟನೆ ತಿರುವು ಪಡೆದಿದೆ. ಗುರುವಾರ ರಾತ್ರಿ 10 ಗಂಟೆಯ ವೇಳೆಗೆ ಹೋರಾಟಗಾರ್ತಿ ಸರಸ್ವತಿ ಅವರನ್ನು ಉಪವಿಭಾಗಾಧಿಕಾರಿ ಕಾವ್ಯಾರಾಣಿ ಭೇಟಿ ಮಾಡಿದ್ದು, ಮನವೊಲೈಕೆಯ ಪ್ರಯತ್ನ ನಡೆಸಿದ್ದಾರೆ.
ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ ನಡೆದ ಅನ್ಯಾಯ ಪ್ರಶ್ನಿಸಿ ಅವರು ಪ್ರತಿಭಟನೆ ನಡೆಸಿದ್ದು, ಗಾಂಧೀಜಿ ಫೋಟೋ ಮುಂದೆ ನಡೆದ ಈ ಹೋರಾಟ ಗುರುವಾರ ಎರಡನೇ ದಿನ ಪೂರೈಸಿತು. ಪ್ರತಿಭಟನಾ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿ ಕಾವ್ಯರಾಣಿ ಅವರ ಮಾತು ಆಲಿಸಿದ ಸರಸ್ವತಿ ಅವರು ಅಹೋರಾತ್ರಿ ಧರಣಿಯನ್ನು ಹಿಂಪಡೆದರು. ಜೊತೆಗೆ ಈ ವೇಳೆಯಲ್ಲಿಯೇ ಕಾನೂನು ಹೋರಾಟ ಮುಂದುವರೆಸುವುದಾಗಿ ಘೋಷಿಸಿದರು.
ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣಾ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದ ಬಗ್ಗೆ ಆಕ್ಷೇಪಿಸಿ ಚುನಾವಣಾಧಿಕಾರಿಯಾಗಿದ್ದ ಶಿರಸಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ವಿರುದ್ಧ ಸರಸ್ವತಿ ಎನ್ ರವಿ ಅವರು ಈ ವೇಳೆ ಕಿಡಿಕಾರಿದರು. `ನಾನು ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪುಗಳ ಪ್ರತಿನಿಧಿಯಲ್ಲ. ಸಹಕಾರಿ ಕ್ಷೇತ್ರದ ಮಹತ್ವ ಹಾಗೂ ಅದಕ್ಕಿರುವ ಗೌರವವನ್ನು ತಿಳಿದುಕೊಂಡೇ ಹತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೇನೆ’ ಎಂದು ನೆರೆದಿದ್ದವರಿಗೆ ಮನವರಿಕೆ ಮಾಡಿದರು. `ನನಗೆ ಸಹಕಾರಿ ಕ್ಷೇತ್ರ ಹಾಗೂ ಸಹಕಾರಿ ಸಂಘ-ಸOಸ್ಥೆಗಳ ಹಿತ ಕಾಪಾಡುವುದೇ ಮುಖ್ಯ. `ಸಹಕಾರಿಗಳನ್ನು ಹತ್ತಿಕ್ಕುವ, ಅಸಹಾಯಕ ಸಹಕಾರಿ ಸಂಸ್ಥೆಗಳಿಗೆ ಆಮಿಷವೊಡ್ಡಿ ಅವರ ಪರಿಸ್ಥಿತಿಗಳನ್ನು ದುರುಪಯೋಗ ಮಾಡಿಕೊಳ್ಳುವ ಹಾಗೂ ಸಹಕಾರಿಗಳ ಮಧ್ಯೆ ಒಡಕು ಉಂಟು ಮಾಡಿ ಲಾಭಪಡೆಯುವ ಹುನ್ನಾರವನ್ನು ಸಹಿಸುವುದಿಲ್ಲ’ ಎಂದು ಪುನರುಚ್ಚರಿಸಿದರು.
`ನಾನು ಚುನಾವಣಾ ಅಕ್ರಮದ ಬಗ್ಗೆ ಧರಣಿ ನಡೆಸಿದ್ದೇನೆ. ಯಾವುದೇ ವ್ಯಕ್ತಿಗಳ ವಯಕ್ತಿಕ ವಿಚಾರದ ವಿರುದ್ಧ ಅಲ್ಲ’ ಎಂದು ಸ್ಪಷ್ಠಪಡಿಸಿದರು. ಕದಂಬ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷ ಶಂಭುಲಿOಗ ಹೆಗಡೆ ಹಾಗೂ ಶ್ರೀಮಾತಾ ಸೊಸೈಟಿಯ ಅಧ್ಯಕ್ಷ ಜಿ ಎನ್ ಹೆಗಡೆ ಹಿರೇಸರ ಅವರು ಈ ಪ್ರತಿಭಟನೆಯ ವಿರುದ್ಧ ಮಾತನಾಡಿದ್ದಾರೆ. ಅವರ ಹೇಳಿಕೆಯಲ್ಲಿ ರಾಜಕೀಯ ಹಿತಾಸಕ್ತಿ, ಸಂಚು ಹಾಗೂ ಸಹಕಾರಿ ಸಂಘಕ್ಕೆ ದ್ರೋಹ ಎಸಗುವ ಹುನ್ನಾರವಿದ್ದಂತೆ ಕಾಣುತ್ತಿದೆ’ ಎಂಬ ಅನುಮಾನವ್ಯಕ್ತಪಡಿಸಿದರು.
ಇನ್ನೂ `ಈ ಅಕ್ರಮದ ಬಗ್ಗೆ ಮುಖ್ಯಮಂತ್ರಿ, ಸಹಕಾರಿ ಸಚಿವ, ಉಸ್ತುವಾರಿ ಸಚಿವರಿಗೆ ದೂರು ನೀಡುವೆ. ಶಾಸಕರು-ಸಂಸದರಿಗೂ ದೂರು ನೀಡಿದ್ದು, ದಾಖಲೆಗಳ ಆಧಾರದಲ್ಲಿ ಕಾನೂನು ಹೋರಾಟ ಮುಂದುವರೆಸುವೆ’ ಎಂದು ಅವರು ಘೋಷಿಸಿದರು.