ಎರಡು ವರ್ಷಗಳ ಹಿಂದೆ ಶಿರಸಿ ದೇವನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲವು ಕಡೆ ಭೂ ಕುಸಿತವಾಗಿದ್ದು, ರಸ್ತೆಗಳೆಲ್ಲವೂ ಹಾಳಾಗಿದೆ. ಆದರೆ, ಈವರೆಗೂ ಶಾಸಕ ಭೀಮಣ್ಣ ನಾಯ್ಕ ಇಲ್ಲಿ ಭೇಟಿ ನೀಡಿಲ್ಲ!
ಶಿರಸಿ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಮತ್ತಿಘಟ್ಟ ಕೆಳಗಿನ ಕೇರಿ ಸಮೀಪದ ಹಲವು ಊರುಗಳು ಕನಿಷ್ಟ ಸೌಕರ್ಯವೂ ಇಲ್ಲದೇ ನಲುಗಿದೆ. ಇಲ್ಲಿನ ಜನ ದಟ್ಟ ಕಾಡಿನೆ ಮಧ್ಯೆ ನಿತ್ಯವೂ ಭಯದ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರ ನೀಡಿದ ಪುಕ್ಕಟ್ಟೆ ಬಸ್ ಪ್ರಯಾಣಕ್ಕೂ ಇಲ್ಲಿನವರು ಐದು ಕಿಮೀ ಘಟ್ಟ ಹತ್ತಬೇಕು. ಗ್ರಾಮಗಳಿಗೆ ಇರುವ ಒಂದು ರಸ್ತೆ ಕಳೆದ ಮಳೆಗಾಲದಲ್ಲಿ ಭೂ ಕುಸಿತವಾಗಿ ಕಂದಕವಾಗಿ ನಿರ್ಮಾಣಗೊಂಡಿದ್ದರೂ ಜನಪ್ರತಿನಿಧಿಗಳು ಒಬ್ಬರೂ ಬರಲಿಲ್ಲ. ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅರ್ಜಿ ಕೊಟ್ಟರೂ ಯಾರೂ ರಸ್ತೆ ನಿರ್ಮಿಸಿ ಕೊಡಲಿಲ್ಲ.
ಶಾಸಕರು ಭೇಟಿ ನೀಡಿದ ಆ ಊರುಗಳಿಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಗುರುವಾರ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಜನ ಶಾಸಕರ ವಿರುದ್ಧ ಸಾಕಷ್ಟು ಆಕ್ರೋಶವ್ಯಕ್ತಪಡಿಸಿದರು. ಮಾಡನಮನೆ, ಉಂಬಳಗೇರಿ, ಗುಂಡಪ್ಪೆ, ನರಸೆಬೈಲ್ ಮೊದಲಾದ ಗ್ರಾಮಸ್ಥರ ಸಮಸ್ಯೆ ಆಲಿಸಿದ ಅವರು ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
`ಮಣ್ಣಿನ ರಸ್ತೆಯಲ್ಲಿ ಭೂ ಕುಸಿತದಿಂದಾಗಿ ಬೃಹತ್ ಕಂದಕ ನಿರ್ಮಾಣವಾಗಿದೆ. ಕಳೆದ ಮಳೆಗಾಲದ 15 ದಿನಗಳ ಕಾಲ ದ್ವೀಪವಾಗಿ, ಬೇರೆ ಸಂಪರ್ಕವೇ ಇಲ್ಲವಾಗಿತ್ತು’ ಎಂದು ಜನ ತಮ್ಮ ಸಮಸ್ಯೆ ಬಿಚ್ಚಿಟ್ಟರು. `ಮರದಿಂದ ಬಿದ್ದವನನ್ನು ಕಂಬಳಿಯಲ್ಲಿ ಹೆಗಲಮೇಲೆ ಹೊತ್ತೊಯ್ದರೂ ಆತ ಬದುಕುಳಿಯಲಿಲ್ಲ. ಶಾಸಕ ಭೀಮಣ್ಣರಿಗೆ ವಿಷಯ ತಿಳಿದಿದ್ದರೂ ಏನೂ ಮಾಡಿಲ್ಲ’ ಎಂದು ದೂರಿದರು.
`ಮಾಡನಮನೆ, ಉಂಬಳಕೇರಿ, ಗುಂಡಪ್ಪೆ, ನರಸೇಬೈಲ್ ಸೇರಿದಂತೆ 6 ಕ್ಕೂ ಅಧಿಕ ಹಳ್ಳಿಗಳಿಗೆ ಈ ರಸ್ತೆ ಮಾರ್ಗವೊಂದೇ ಸಂಪರ್ಕ ದಾರಿ. ಮತ್ತಿಘಟ್ಟದಿಂದ ಕಿಮ್ಮಾಣಿ ಮೂಲಕ ಅಂಕೋಲಾ ತಾಲೂಕನ್ನು ಈ ರಸ್ತೆ ಸಂಪರ್ಕಿಸುತ್ತದೆ. ಮಾರ್ಗದ ಅನೇಕ ಕಡೆಗಳಲ್ಲಿ ಸೇತುವೆ ಇರದ ಕಾರಣ ಮಳೆಗಾಲದಲ್ಲಿ ಸಂಪರ್ಕ ಕಡಿತವಾಗುತ್ತದೆ. ಜುಲೈನಲ್ಲಿ ಸುರಿದ ಮಳೆಗೆ ರಸ್ತೆ ಸಂಪರ್ಕ ಕಡಿತವಾಗಿದ್ದು, ಜನ ಓಡಾಟಕ್ಕೆ ಇದೀಗ ಸರಿಯಾದ ದಾರಿಯೂ ಇಲ್ಲಿಲ್ಲ’ ಎಂದು ಗೋಪಾಲ ಸಿದ್ಧಿ, ರೇಣುಕಾ ಸಿದ್ದಿ, ಗಣಪತಿ ಸಿದ್ದಿ, ವಿನಯ ಹೆಗಡೆ ಅಳಲು ತೋಡಿಕೊಂಡರು.
ಕರೆದಾಗ ಬರುವ ಶಾಸಕರು ಕೋಳಿಯಲ್ಲ!
`ಸ್ವಲ್ಪ ದಿನದ ಹಿಂದೆ ಶಾಸಕ ಭೀಮಣ್ಣ ನಾಯ್ಕ ಮತ್ತೀಘಟ್ಟಕ್ಕೆ ಭೇಟಿ ನೀಡಿದ್ದರು. ಆಗಲೇ ಇಲ್ಲಿಗೂ ಶಾಸಕರನ್ನು ಕರೆಯಿಸುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಜನ ಮನವಿ ಮಾಡಿದ್ದರು. `ನೀವು ಕರೆದ ಕೂಡಲೇ ಬರಲು ಶಾಸಕರು ಕೋಳಿಯಲ್ಲ’ ಎಂದು ಮರಿ ಪುಡಾರಿಗಳು ಉಡಾಫೆ ಮಾತನಾಡಿದ ಬಗ್ಗೆ ಊರಿನವರು ಆಕ್ರೋಶವ್ಯಕ್ತಪಡಿಸಿದರು.