ನೂರಾರು ವರ್ಷಗಳಿಂದ ಆ ಊರಿನಲ್ಲಿ ಒಂದೇ ಒಂದು ಮರ ಕಳ್ಳತನ ನಡೆದಿಲ್ಲ. ಅರಣ್ಯ ಪ್ರದೇಶ ಅತಿಕ್ರಮಣವಾಗಿಲ್ಲ. ಹೀಗಾಗಿ ದಟ್ಟ ಕಾಡಿನ ಜೀವ ವೈವಿಧ್ಯಕ್ಕೆ ಈವರೆಗೂ ತೊಂದರೆ ಆಗಿಲ್ಲ!
ಉತ್ತರ ಕನ್ನಡದ ಕುಮಟಾ ತಾಲೂಕಿನ ಹಳಕಾರ ಗ್ರಾಮ ನಾಡಿಗೆ ಮಾದರಿ. ಅಲ್ಲಿನ 219 ಎಕರೆ ಪ್ರದೇಶ ರಕ್ಷಣೆಗಾಗಿ ಊರಿನ ಜನ ಸಮಿತಿ ರಚಿಸಿಕೊಂಡು ಕಾವಲು ಕಾಯುತ್ತಾರೆ. ಕಾಡನ್ನು ದೇವರು ಎಂದು ಪೂಜಿಸುವ ಅಲ್ಲಿನವರು ಗಿಡ-ಮರಗಳಿಗೆ ಕಿಂಚಿತ್ತು ನೋವಾಗುವದನ್ನು ಸಹಿಸುವುದಿಲ್ಲ.
ಪ್ರಕೃತಿ ಸೇವೆ ಮಾಡುವುದು ಹಳಕಾರ ಗ್ರಾಮದವರಿಗೆ ಪರಂಪರಾಗತವಾಗಿ ಬಂದ ಸಂಪ್ರದಾಯ. ಹಿರಿಯರು ಹೇಳಿದ ದಾರಿಯಲ್ಲಿ ಈಗಿನ ತಲೆಮಾರಿನವರು ಜೀವಿಸುತ್ತಿದ್ದು, ಅವರಿಗೆ ವನ ದೇವಿಯ ಬಗ್ಗೆ ಅಪಾರ ನಂಬಿಕೆ. ಹೀಗಾಗಿ ಹಳಕಾರಿನ ಜನ ಶತಮಾನಗಳ ಹಿಂದಿನಿoದಲೂ ಕಾಡನ್ನು ದೇವರಂತೆ ಆರಾಧಿಸುತ್ತ ಬಂದಿದ್ದಾರೆ. ದಾಖಲೆಗಳ ಪ್ರಕಾರ 1920ರಿಂದ ಈ ಊರಿನಲ್ಲಿ ಒಂದೇ ಒಂದು ಅಡಿ ಅರಣ್ಯ ಭೂಮಿ ಸಹ ಅತಿಕ್ರಮಣವಾಗಿಲ್ಲ!
ಹಳಕಾರ ಗ್ರಾಮ ಒಟ್ಟು 475 ಎಕರೆ ವಿಸ್ತೀರ್ಣವಿದೆ. ಅದರಲ್ಲಿ 219 ಎಕರೆ ದಟ್ಟ ಅರಣ್ಯ ಪ್ರದೇಶ. ಆ ಅರಣ್ಯವೇ ಊರಿನವರ ಉಸಿರು. ಹೀಗಾಗಿ ಒಂದೇ ಒಂದು ಗಿಡ-ಮರ, ಪ್ರಾಣಿ ಪಕ್ಷಿಗಳಿಗೆ ಸಹ ಅಲ್ಲಿನವರು ನೋವುಂಟು ಮಾಡುವುದಿಲ್ಲ. ಬೇರೆಯವರು ಕಾಡಿಗೆ ಪ್ರವೇಶಿಸಿ ಪರಿಸರ ಹಾಳು ಮಾಡಲು ಸಹ ಬಿಡುವುದಿಲ್ಲ. ಆ ಕಾಡಿನಿಂದ ಹಳಕಾರ ಊರಿನವರಿಗೆ ಆದಾಯವಿಲ್ಲ. ಅದಾಗಿಯೂ ಅಲ್ಲಿನವರಿಗೆ ಕಾಡಿನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ.
ಸಂಪತ್ಬರಿತವಾದ ಸಸ್ಯಕಾಶಿ, ನೈಸರ್ಗಿಕವಾಗಿ ಬೆಳೆದ ಗಿಡ ಮೂಲೆಕೆಗಳು, ಯಥೇಚ್ಚವಾಗಿರುವ ಜೀವ ಸಂಕುಲ ಊರಿನ ಹಿರಿಮೆ ಹೆಚ್ಚಿಸಿದೆ. ಈ ಕಾರಣದಿಂದಲೇ ಆ ಊರು ದೇಶ-ವಿದೇಶಿಗರ ಗಮನ ಸೆಳೆಯುತ್ತಿದೆ. ಈ ಮೊದಲು ಒಟ್ಟು 265 ಏಕರೆ ಅರಣ್ಯ ಭೂಮಿ ಗ್ರಾಮದಲ್ಲಿತ್ತು. ಆ ಪೈಕಿ 46 ಏಕರೆ ಜಮೀನು ರೈಲು ಯೋಜನೆಗೆ ಹೋಯಿತು. ಹೀಗಾಗಿ, 219 ಎಕರೆ ಪ್ರದೇಶದಲ್ಲಿ ಅರಣ್ಯ ಉಳಿದಿದ್ದು, ಕಾಡಿನಲ್ಲಿನ ಒಣ ಎಲೆ ಸಂಗ್ರಹಕ್ಕೆ ಸಹ ಇಲ್ಲಿ ಊರಿನವರ ಒಪ್ಪಿಗೆ ಕಡ್ಡಾಯ.
ಹಳಕಾರ ಗ್ರಾಮದಲ್ಲಿ ರೈತರು, ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ಹೆಚ್ಚಿಗೆ ಓದಿದವರ ಸಂಖ್ಯೆ ಕಡಿಮೆಯಿದ್ದರೂ ಅಪಾರವಾದ ಕಾಡು ಜ್ಞಾನ ಹೊಂದಿದವರು ಎಲ್ಲಾ ಮನೆಯಲ್ಲಿಯೂ ಮಾತಿಗೆ ಸಿಗುತ್ತಾರೆ. ಪ್ರತಿ ವರ್ಷ ಊರಿನವರೆಲ್ಲ ಸೇರಿ ಇಲ್ಲಿನ 10 ಒಣ ಮರ ಕಟಾವು ಮಾಡುತ್ತಾರೆ. ಅದೇ ಜಾಗದ ಸುತ್ತ 100ಕ್ಕೂ ಅಧಿಕ ಗಿಡಗಳನ್ನು ನೆಡುತ್ತಾರೆ. `ಈ ಕಾಡು ನಮ್ಮದು. ಕಾಡಿನಲ್ಲಿರುವ ಗಿಡ-ಮರಗಳು ನಮ್ಮ ಮಕ್ಕಳು’ ಎಂದು ಊರಿನವರು ಭಾವಿಸಿದ್ದಾರೆ.