ಯಲ್ಲಾಪುರದ ಕಣ್ಣಿಗೇರಿ-ಕೊಡಸೆ-ಚಿನ್ನಹೊಕಳಿ ಭಾಗದಲ್ಲಿ ಹೋಳಿ ಹಬ್ಬ ಎಂದರೆ ಸುಗ್ಗಿ ಕುಣಿತದ ಸಂಭ್ರಮ. ಅನಾಧಿಕಾಲದಿಂದಲೂ ನಡೆಸಿಕೊಂಡು ಬಂದ ಈ ಪರಂಪರೆಯನ್ನು ಊರಿನ 60 ವರ್ಷ ಮೇಲ್ಪಟ್ಟ ವೃದ್ಧರು ಮುಂದಿನ ತಲೆಮಾರಿನವರಿಗೆ ಕಲಿಸುತ್ತಿದ್ದಾರೆ.
ನಿನ್ನೆಯ ಸೋಮವಾರದಿಂದ ಈ ಭಾಗದಲ್ಲಿ ಸುಗ್ಗಿ ಕುಣಿತ ಜೋರಾಗಿದೆ. ವೇಷಧಾರಿಗಳು ಮನೆ ಮನೆಗೆ ತೆರಳಿ ಪ್ರದರ್ಶನ ನೀಡುತ್ತಿದ್ದಾರೆ. ಶನಿವಾರದವರೆಗೂ ಈ ಸಾಂಪ್ರದಾಯಿಕ ಕುಣಿತ ನಡೆಯಲಿದ್ದು, ಇದಕ್ಕಾಗಿ ಅಲ್ಲಿನ ಕಲಾವಿದರು ಮೂರು ವಾರಗಳ ತಾಲೀಮು ನಡೆಸಿದ್ದಾರೆ. ಸುಗ್ಗಿ ಕುಣಿತದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಹ ನಡೆಯುತ್ತಿವೆ.
ಸುಗ್ಗಿ ಕುಣಿತ ಎಂಬುದು ಈ ಭಾಗದ ಶ್ರೀಮಂತ ಕಲೆ. ವಿಶೇಷವಾಗಿ ಹೋಳಿ ಹಬ್ಬದ ಅವಧಿಯಲ್ಲಿ ವಿಶೇಷ ಧರಿಸುಗಳ ಜೊತೆ ಕಲಾವಿದರು ಮನೆಯಿಂದ ಹೊರಬರುತ್ತಾರೆ. ದೇವರಿಗೆ ಮರ್ಯಾದಿ ಅರ್ಪಿಸಿ ಸುಗ್ಗಿ ಕುಣಿತ ಶುರು ಮಾಡುತ್ತಾರೆ. ಬಣ್ಣ ಬಣ್ಣದ ವೇಷ-ಭೂಷಣ ಧಿರಿಸಿ ನಡುಮದ್ಯದಲ್ಲಿ ತುಳಸಿಯನ್ನಿರಿಸಿ ಭಕ್ತಿ ಗೀತೆ-ಭಜನೆಗಳ ಜೊತೆ ಹೆಜ್ಜೆ ಹಾಕುವುದು ಸುಗ್ಗಿ ಕುಣಿತದ ವಿಶೇಷ.
`ಈ ಕುಣಿತ ನೋಡುವುದಕ್ಕಾಗಿಯೇ ಊರಿನಲ್ಲಿ ಅನೇಕರು ಸೇರುತ್ತಾರೆ. ಪೂರ್ವಜರ ಕಾಲದಿಂದಲೂ ನಡೆದು ಬಂದ ಸಂಪ್ರದಾಯವನ್ನು ಪ್ರತಿ ವರ್ಷ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಈ ನೆಲದ ಸಂಸ್ಕೃತಿ ರಕ್ಷಣೆಯ ಜೊತೆ ಬಾಂಧವ್ಯ ವೃದ್ಧಿಗೆ ಈ ಪರಂಪರೆ ಸಹಕಾರಿಯಾಗಿದೆ’ ಎಂದು ಅಲ್ಲಿನ ರವಿ ಕೈಟ್ಕರ್ ವಿವರಿಸಿದರು.