ಪರಿಶಿಷ್ಟ ಜಾತಿಯವರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯದ ಪರಿಶಿಷ್ಟ ಜಾತಿಯ ವಿವಿಧ ಸಂಘಟನೆಯವರು ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ಅಧ್ಯಕ್ಷರ ಜೊತೆ ಚರ್ಚಿಸಿದ್ದಾರೆ. ಭಾನುವಾರ ಮಂಗಳೂರಿನಲ್ಲಿ ನಡೆದ ಈ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅನೇಕ ಮುಖಂಡರು ಭಾಗವಹಿಸಿ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಅನುಸೂಚಿತ ಜಾತಿಗಳ ಆಯೋಗದ ಅಧ್ಯಕ್ಷ ಕಿಶೋರ ಭಾಯಿ ಮಖ್ವಾನಾ ಅವರು ಪರಿಶಿಷ್ಟರ ಕುಂದು-ಕೊರತೆ ಆಲಿಸಿದ್ದು, ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದ್ದಾರೆ. `ಕರಾವಳಿ ಭಾಗದಲ್ಲಿ ಪರಿಶಿಷ್ಟರಲ್ಲದವರಿಗೂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಸಿಗುತ್ತಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಕ್ರಮವಾಗುತ್ತಿಲ್ಲ’ ಎಂದು ಮುಖಂಡರಾದ ಸುಭಾಷ್ ಕಾನಡೆ ಅವರು ವಿವರಿಸಿದರು.
`ಪರಿಶಿಷ್ಟರಲ್ಲದಿದ್ದರೂ ಹಿಂದುಳಿದ ವರ್ಗದ ಪಟ್ಟಿಯ ಮೀನುಗಾರ ಸಮುದಾಯದ ಮೊಗೇರರು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಬಿ ಆರ್ ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಯವರಿಗೆ ನೀಡಿದ ಸೌಲಭ್ಯವನ್ನು ಮೊಗೇರ ಸಮುದಾಯದವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪರಿಶಿಷ್ಟರಿಗೆ ನೀಡಿದ ಸೌಲಭ್ಯ ಅವರಿಗೆ ಮಾತ್ರ ಸೀಮಿತವಾಗಿರಬೇಕು’ ಎಂದು ಮುಖಂಡರಾದ ಸುಂದರ್ ಮೇರಾ, ತುಳಸಿದಾಸ ಪಾವಸ್ಕರ ಅವರು ಮನವರಕೆ ಮಾಡಿದರು.
`ರಾಜ್ಯ ಸರ್ಕಾರ ಬಜೆಟ್ ಅಧೀವೇಶನದಲ್ಲಿ ಮೀನುಗಾರಿಕೆ ಮಾಡುವ ಪರಿಶಿಷ್ಟರಿಗೆ ವಾಹನ ಖರೀದಿ ಸಾಲ, ಬೋಟ್ ರಿಪೇರಿಗೆ ಸಬ್ಸಿಡಿ ಘೋಷಿಸಿದೆ. ಮೊಗೇರ ಜಾತಿಯ ಹೆಸರಿನಲ್ಲಿ ಮೀನುಗಾರರು ಪಡೆದಿರುವ ಈ ಪ್ರಮಾಣಪತ್ರವೇ ಅಕ್ರಮವಾಗಿದ್ದರಿಂದ ಈ ಯೋಜನೆ ಮೂಲಕ ಸಕ್ರಮಗೊಳಿಸುವ ಹುನ್ನಾರ ತಡೆಯಬೇಕು’ ಎಂದು ಆಗ್ರಹಿಸಿದರು.
`ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮಂತ್ರಾಲಯದಿAದ ಸಮೀಕ್ಷೆ ನಡೆಸಲಾಗಿದ್ದು, ಸಮಿತಿ ಅಧ್ಯಕ್ಷ ಕರಿಯಾ ಮುಂಡಾ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅಲ್ಲಿನ ಶಿಫಾರಸ್ಸಿನ ಪ್ರಕಾರ ಪ್ರತಿ ರಾಜ್ಯದಲ್ಲಿಯೂ ಅನುಭವಿ ವಕೀಲರನ್ನು ಎಡಿಷನಲ್ ಎಡ್ವೊಕೇಟ್ ಜನರಲ್ ಎಂದು ನಾಮಕರಣ ಮಾಡಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಬೇಕು’ ಎಂದು ಪ್ರಮುಖರಾದ ಸೀತಾರಾಮ ಕೊಂಚಾಡಿ, ರವೀಂದ್ರ ಮಂಗಳ, ಅಶೋಕ ಕೊಂಚಾಡಿ ಒತ್ತಾಯಿಸಿದರು.
`ಉದ್ಯೋಗ ವಿಷಯದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಾತಿ ಪ್ರಮಾಣಪತ್ರ ಪರಿಶೀಲನೆ ನಡೆದ ನಂತರ ಸಿಂಧುತ್ವ ಪ್ರಮಾಣಪತ್ರ ನೀಡಿ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ನೀಡಲಾಗುತ್ತದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯಿಸದ ಕಾರಣ ಪರಿಶಿಷ್ಟರಲ್ಲದವರು ಸುಳ್ಳು ಪ್ರಮಾಣ ಪತ್ರ ಪಡೆದು ಚುನಾವಣೆ ಎದುರಿಸುತ್ತಿದ್ದಾರೆ. ಅಲ್ಲಿಯೂ ಜಾತಿ ಪ್ರಮಾಣ ಪತ್ರದ ಪುನರ್ ಪರಿಶೀಲನೆ ನಡೆಯಬೇಕು’ ಎಂದು ಸಭೆಯಲ್ಲಿದ್ದ ಕಿರಣ ಶಿರೂರ ಹಾಗೂ ಸಂತೋಷ ಚಂದಾವರ ಆಗ್ರಹಿಸಿದರು.