ಕೆಮ್ಮು ಹಾಗೂ ಕಫದಿಂದ ಬಳಲುತ್ತಿದ್ದ ಎಂಟು ವರ್ಷದ ಸ್ನೇಹಾ ಕೋಠಾರಕರ್ ಆಸ್ಪತ್ರೆಗೆ ಬಂದರೂ ಪ್ರಯೋಜನವಾಗದೇ ಸಾವನಪ್ಪಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.
ಕಾರವಾರದ ಮಾಜಾಳಿಯ ಸ್ನೇಹಾ ಸಾಗರ ಕೋಠಾರಕರ ಅನಾರೋಗ್ಯಕ್ಕೆ ಒಳಗಾಗಿದ್ದರು. ನಾಲ್ಕು ದಿನದ ಹಿಂದೆ ವಿಪರೀತ ಪ್ರಮಾಣದಲ್ಲಿ ಅವರಿಗೆ ಕಫ ಕಾಣಿಸಿಕೊಂಡಿತ್ತು. ಕುಮಟಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆದ ಅವರು ಅಂಕೋಲಾಗೆ ಆಗಮಿಸಿದ್ದರು. ಅಲ್ಲಿಂದ ಮುಂದೆ ಬಸ್ಸಿನಲ್ಲಿ ಕಾರವಾರಕ್ಕೆ ಮರಳುವಾಗ ಅಮದಳ್ಳಿಯ ಬಳಿ ಸ್ನೇಹಾ ಅವರು ವಾಂತಿ ಮಾಡಿಕೊಂಡರು.
ತಲೆನೋವು ಎಂದ ಕಾರಣ ತಕ್ಷಣ ಅವರನ್ನು ಅಂಕೋಲಾ ತಾಲೂಕಿನ ಹಟ್ಟಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು. ಪ್ರಕರಣದ ಗಂಭೀರತೆ ಅರಿತ ಅಲ್ಲಿನ ವೈದ್ಯ ಜುಬೇರ ಖಾನ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಅಂಕೋಲಾಗೆ ಕರೆ ತಂದರು. ತಮ್ಮ ಕಾರಿನಲ್ಲಿ ಬಾಲಕಿಯನ್ನು ಆಸ್ಪತ್ರೆಗೂ ತಂದರು. ವೈದ್ಯರಾದ ಡಾ ಅನುಪಮಾ ಮತ್ತು ಡಾ ಜಗದೀಶ ನಾಯಕ ಚಿಕಿತ್ಸೆ ನೀಡಲು ಶುರು ಮಾಡುವುದರೊಳಗೆ ಸ್ನೇಹಾ ಕೋಠಾರಕರ್ ಸಾವನಪ್ಪಿದ್ದರು.
ಬಾಲಕಿ ಸಾವನಪ್ಪಿದ ವಿಷಯ ಕೇಳಿ ಅವರ ಕುಟುಂಬದವರು ಆಘಾತಕ್ಕೆ ಒಳಗಾದರು. ಅಂಕೋಲಾ ಪೂಜಗೇರಿಯ ಬಾಲಕಿ ಅಜ್ಜಿಮನೆಯಿದ್ದು, ಅಲ್ಲಿನವರು ಆಸ್ಪತ್ರೆಗೆ ಧಾವಿಸಿ ಬಂದರು. ನೆರೆದಿದ್ದವರೆಲ್ಲರೂ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಕಾಣಿಸಿತು. ಪೊಲೀಸರು ಆಗಮಿಸಿ, ಸಂಬoಧಿಕರನ್ನು ಸಮಾಧಾನ ಮಾಡಿದರು.