ಏಳು ದಿನದ ಒಳಗೆ ಬೆಳೆ ವಿಮಾ ಪರಿಹಾರ ರೈತರ ಖಾತೆಗೆ ಜಮಾ ಮಾಡುವಂತೆ ಕೇಂದ್ರ ಸರ್ಕಾರವೇ ವಿಮಾ ಕಂಪನಿಗೆ ಸೂಚನೆ ನೀಡಿದರೂ ಈವರೆಗೆ ಹಣ ಜಮಾ ಆಗಿಲ್ಲ. ಕೇಂದ್ರ ಸರ್ಕಾರ ನೀಡಿದ ಸೂಚನೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ವಿಮಾ ಕಂಪನಿ ತಕರಾರು ಸಲ್ಲಿಸಿರುವುದೇ ಹಣ ಬಿಡುಗಡೆಯಾಗದಿರಲು ಮುಖ್ಯ ಕಾರಣ!
ಬೆಳೆ ವಿಮೆ ಪರಿಹಾರವನ್ನು ಸಮಯಕ್ಕೆ ಸರಿಯಾಗಿ ಒದಗಿಸಬೇಕು ಎಂದು ಅನೇಕ ಕಡೆ ರೈತರು ಪ್ರತಿಭಟಿಸಿದ್ದರು. ಈ ಹಿನ್ನಲೆ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ `ಎರಡು ವಾರದ ಒಳಗೆ ವಿಮೆ ಪರಿಹಾರ ಜಮಾ ಆಗಲಿದೆ’ ಎಂಬ ಭರವಸೆ ನೀಡಿದ್ದರು. ವಿಮೆ ಪರಿಹಾರ ಜಮಾ ಆಗದೇ ಇದ್ದಾಗ ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿಯೂ ಅವರು ಆಶ್ವಾಸನೆ ನೀಡಿದ್ದರು. ಅದರ ಬೆನ್ನಲ್ಲೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ಒಂದು ವಾರದೊಳಗೆ ಹಣ ಜಮಾ ಆಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರವೇ ವಿಮಾ ಕಂಪನಿಗೆ ತಾಕೀತು ಮಾಡಿದೆ’ ಎಂಬ ವಿಷಯ ತಿಳಿಸಿದ್ದರು.
ಆದರೆ, ಶಿವರಾಮ ಹೆಬ್ಬಾರ್ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ ಅವಧಿ ಮುಗಿದರೂ ಬೆಳೆ ವಿಮೆ ಪರಿಹಾರ ಮಾತ್ರ ಜಮಾ ಆಗಿಲ್ಲ. ಪಾಸ್‌ಬುಕ್ ಹಿಡಿದು ಬ್ಯಾಂಕ್’ಗೆ ತೆರಳಿದವರಿಗೆ ಖಾತೆಯೊಳಗೆ ಹಣ ಕಾಣಲಿಲ್ಲ. ಈ ಬಗ್ಗೆ ಕಾರಣ ಹುಡುಕಿದಾಗ ವಿಮಾ ಕಂಪನಿ ಮತ್ತೆ ಈ ಸೂಚನೆ ಮರುಪರಿಶೀಲನೆ ಮಾಡುವಂತೆ ತಕರಾರು ಸಲ್ಲಿಸಿರುವುದು ಗಮನಕ್ಕೆ ಬಂದಿದ್ದು, ಆ ತಕರಾರರನ್ನು ಇದೀಗ ಕೇಂದ್ರ ಸರ್ಕಾರ ಒಪ್ಪಿಲ್ಲ.
ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮಾ ಮಾಡುವುದು ಕ್ಷೇಮ ಜನರಲ್ ಇನ್ಸೂರೆನ್ಸ್ ಕಂಪನಿಯ ಕರ್ತವ್ಯವಾಗಿತ್ತು. ಆದರೆ, ಕಾಸು ಬಿಚ್ಚಲು ಮನಸ್ಸಿಲ್ಲದ ಈ ಕಂಪನಿ ಅಧಿಕಾರಿಗಳು ರೈತರಿಗೆ ಪದೇ ಪದೇ ಸಮಸ್ಯೆ ಮಾಡುತ್ತಿರುವುದು ಇದೀಗ ದೃಢವಾಗಿದೆ. ಇದನ್ನು ಅರಿತ ಕೇಂದ್ರ ಸರ್ಕಾರ ಕ್ಷೆಮಾ ಕಂಪನಿಯ ಬೇಡಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
`ಕರಾರಿನ ಪ್ರಕಾರ ವಿಮೆ ಪರಿಹಾರ ನೀಡುವುದು ಕಂಪನಿಯ ಕರ್ತವ್ಯ. ಅಂಕಿ-ಅAಶಗಳ ಬಗ್ಗೆ ಮೊದಲು ತಕರಾರು ಸಲ್ಲಿಸದೇ ಇದೀಗ ಪರಿಹಾರ ತಿರಸ್ಕರಿಸಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿದೆ. `ಮುಖ್ಯ ಹವಾಮಾನ ಮಾಪನ ಕೇಂದ್ರಗಳ ವರದಿ ಲಭ್ಯವಿಲ್ಲವಾದರೆ ದೃಢೀಕರಣ ಹವಾಮಾನ ಮಾಪನ ಕೇಂದ್ರಗಳ ದಾಖಲೆ ಆಧರಿಸಿ ಪರಿಹಾರ ನೀಡುವ ಬಗ್ಗೆ ಟೆಂಡರ್ ನೋಟಿಫಿಕೇಶನ್’ನಲ್ಲಿ ತಿಳಿಸಲಾಗಿದೆ. ಅದರ ಪ್ರಕಾರ ವಿಮಾ ಪರಿಹಾರ ನೀಡದೇ ಇದ್ದರೆ ಕಂಪನಿ ವಿರುದ್ಧ ಆಡಳಿತಾತ್ಮಕ ಕ್ರಮ ಮತ್ತು ದಂಡ ವಿಧಿಸುವುದಾಗಿ ಎಚ್ಚರಿಸಿದೆ.




