ಭಟ್ಕಳದ ವಯೋವೃದ್ಧೆ ಬಿ ಬಿ ಸಾರಾ ಅವರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ ಅವರು ತಮ್ಮ ದಿಂಬಿನ ಕೆಳಗೆ ಚಿನ್ನಾಭರಣವಿರಿಸಿಕೊಂಡಿದ್ದು, ಅದು ಇದೀಗ ಕಳ್ಳರ ಪಾಲಾಗಿದೆ!
ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ಆಜಾದ್ ರಸ್ತೆಯಲ್ಲಿ ವ್ಯಾಪಾರಿ ತಜಮುಲ್ ಹಸನ್ ಅವರು ತಾಜ್ ವಿಲ್ಲಾ ಎಂಬ ಮನೆ ನಿರ್ಮಿಸಿಕೊಂಡಿದ್ದಾರೆ. ಅಲ್ಲಿ ಅವರ ಅಜ್ಜಿ ಬಿ ಬಿ ಸಾರಾ ಸಹ ವಾಸವಾಗಿದ್ದಾರೆ. ಬಿ ಬಿ ಸಾರಾ ಅವರು ಅನೇಕ ವರ್ಷಗಳ ಹಿಂದೆಯೇ ಚಿನ್ನಾಭರಣಗಳನ್ನು ಮಾಡಿಸಿಕೊಂಡಿದ್ದರು. ಅದನ್ನು ತಾಜ್ ವಿಲ್ಲಾದಲ್ಲಿನ ಹಾಲ್’ನಲ್ಲಿರಿಸುತ್ತಿದ್ದರು.
ಬೇಬಿ ಸಾರಾ ಅವರು ತಾವು ಮಲಗುವಾಗ ಚಿನ್ನಾಭರಣಗಳನ್ನು ಹಾಸಿಗೆಯ ದಿಂಬಿನ ಅಡಿಯಿರಿಸಿ ನಿದ್ದೆ ಮಾಡುತ್ತಿದ್ದರು. ಮಾರ್ಚ 15ರ ರಾತ್ರಿ 11ಗಂಟೆಗೆ ಸಹ ಅವರು ದಿಂಬಿನ ಅಡಿಯಿದ್ದ ಚಿನ್ನಾಭರಣಗಳನ್ನು ನೋಡಿದ್ದರು. ಮರುದಿನ ಬೆಳಗ್ಗೆ 10.30ರ ಸುಮಾರಿಗೆ ನೋಡಿದಾಗ ಅಲ್ಲಿ ಚಿನ್ನವಿರಲಿಲ್ಲ. ಮನೆಯ ಮೂಲೆ ಮೂಲೆ ಹುಡುಕಿದರೂ ಅವರ ಆಭರಣಗಳು ಸಿಗಲಿಲ್ಲ.
90 ಗ್ರಾಂ ತೂಕದ 4.50 ಲಕ್ಷ ರೂ ಮೌಲ್ಯದ ಚಿನ್ನ ಕಾಣೆಯಾದ ಬಗ್ಗೆ ಮೊಮ್ಮಗ ತಜಮುಲ್ ಹಸನ್ ಬಳಿ ಬೇಬಿ ಸಾರಾ ಅವರು ಅಳಲು ತೋಡಿಕೊಂಡರು. ತಜಮುಲ್ ಹಸನ್ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ತೆರಳಿ ವಿಷಯ ಮುಟ್ಟಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.





