ಹೋಳಿ ಹಬ್ಬದ ದಿನ ಕಿರವತ್ತಿಯಲ್ಲಿ ನಡೆದ ಹೊಡೆದಾಟದ ವಿಷಯವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಹೊಡೆದಾಟ ಪ್ರಕರಣ ರಾಜಿಯಲ್ಲಿ ಅಂತ್ಯವಾಗಿ ಐದು ದಿನದ ನಂತರ ಬಿಜೆಪಿ ಆ ವಿಷಯವನ್ನು ಮತ್ತೆ ಕೆದಕಿದ್ದು, ಬಿಜೆಪಿಗರ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಗಂಭೀರವಾಗಿ ಪರಿಗಣಿಸಿದರೆ ಈ ಪ್ರಕರಣ ಹೊಸ ಸ್ವರೂಪ ಪಡೆದು ಇನ್ನಷ್ಟು ಕೋಲಾಹಲ ಸೃಷ್ಠಿಸುವ ಸಾಧ್ಯತೆಗಳಿದೆ.
ಕಿರವತ್ತಿಯಲ್ಲಿ ಹೋಳಿ ಹಬ್ಬದ ವೇಳೆ ಜೋರಾಗಿ ಡಿಜೆ ಸದ್ದು ಮಾಡಿದ್ದರಿಂದ ಗಲಾಟೆ ನಡೆದಿತ್ತು. ಕೆಲವರು ಪೊಲೀಸರ ಮೇಲೆ ಕೈ ಮಾಡಿದ್ದಾರೆ ಎಂಬ ಆರೋಪವ್ಯಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಲಾಠಿ ಬೀಸಿ, ವ್ಯಕ್ತಿಯೊಬ್ಬರ ಕಾಲು ಮುರಿದ ಬಗ್ಗೆ ಊಹಾಪೋಹಗಳು ವ್ಯಕ್ತವಾಗಿದ್ದವು. ಪೊಲೀಸರ ಕ್ರಮ ಖಂಡಿಸಿ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಬಳಿ ನೂರಾರು ಜನ ಆಗಮಿಸಿ ತಡರಾತ್ರಿಯವರೆಗೂ ಪ್ರತಿಭಟಿಸಿದ್ದರು. ಕೊನೆಗೆ ಶಾಸಕ ಶಿವರಾಮ ಹೆಬ್ಬಾರ್ ಮಧ್ಯಸ್ಥಿಕೆಯಲ್ಲಿ ಈ ಪ್ರಕರಣ ರಾಜಿಯಲ್ಲಿ ಅಂತ್ಯವಾಗಿತ್ತು. ಆ ದಿನ ಪ್ರತಿಭಟನಾಕಾರರನ್ನು ಬಿಜೆಪಿಗರು ಬೆಂಬಲಿಸಿರಲಿಲ್ಲ. ಬಿಜೆಪಿ ಬಹಿರಂಗವಾಗಿ ಪೊಲೀಸರಿಗೆ ಬೆನ್ನಿಗೂ ನಿಂತಿರಲಿಲ್ಲ. ಅದಾಗಿಯೂ, ಆ ವೇಳೆ ತಟಸ್ಥ ನಿಲುವು ಪ್ರದರ್ಶಿಸಿದ್ದ ಬಿಜೆಪಿ ಇದೀಗ ಅದೇ ವಿಷಯವಾಗಿ ಧ್ವನಿ ಎತ್ತಿದೆ.
ಗುರುವಾರ ಯಲ್ಲಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ದೂರಿದ್ದಾರೆ. `ಬೆಂಗಳೂರು, ಮಂಗಳೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಯುತ್ತಿತ್ತು. ಅದು ಇದೀಗ ಯಲ್ಲಾಪುರದ ಕಿರವತ್ತಿಯವರೆಗೆ ಬಂದು ತಲುಪಿದೆ’ ಎಂದು ಅವರು ಹೇಳಿದ್ದಾರೆ. `ಕಿರವತ್ತಿಯಲ್ಲಿ ನಡೆದ ಹೋಳಿ ಹಬ್ಬದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ಅನಧಿಕೃತ ಮೂಲದಿಂದ ಎಲ್ಲರಿಗೂ ತಿಳಿದಿದೆ. ಆದರೆ ಅಧಿಕೃತವಾಗಿ ಯಾರ ಮೇಲೂ ಕ್ರಮ ಆಗಿಲ್ಲ. ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲ. ಇನ್ನು ಜನ ಸಾಮಾನ್ಯರ ಸ್ಥಿತಿ ಏನು? ಎಂದು ಅವರು ಪ್ರಶ್ನಿಸಿದ್ದಾರೆ. ಆ ಮೂಲಕ ಈ ಹಿಂದೆ ಆ ಭಾಗದಲ್ಲಿ ನಡೆದ ಹೊಡೆದಾಟ ಪ್ರಕರಣವನ್ನು ಮತ್ತೆ ನೆನಪಿಸಿಕೊಟ್ಟಿದ್ದಾರೆ.
ಇದರೊಂದಿಗೆ ಬಿಜೆಪಿಯ ಸಾಧನೆಯನ್ನು ಕೊಂಡಾಡಿದ ಹರಿಪ್ರಕಾಶ ಕೋಣೆಮನೆ, ಕಾಂಗ್ರೆಸ್ ಸರ್ಕಾರ ಮುಸ್ಲಿಂ ಗುತ್ತಿಗೆದಾರರಿಗೆ ಶೇ 4ರ ಮೀಸಲಾತಿ ಕೊಡುವುದನ್ನು ವಿರೋಧಿಸಿದರು. `ಸಂವಿಧಾನದಲ್ಲಿ ಈಗ ನೀಡಲಾದ ಮೀಸಲಾತಿ ಕಸಿದು ಮುಸ್ಲೀಂ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಈ ನಿರ್ಣಯದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ’ ಎಂದರು. `ಸಹಕಾರಿ ಸಂಘಗಳ ಮೂಲಕ ರೈತರಿಗೆ ಸ್ಥಿರಾಸ್ತಿಯ ಮೇಲೆ ಪ್ರತಿಜ್ಞಾ ಪತ್ರ ನೀಡಿ ಭೋಜಾ ಹಾಕುವ ವ್ಯವಸ್ಥೆ ನಿಲ್ಲಿಸಲಾಗಿದೆ. ತಂತ್ರಾoಶದಲ್ಲಿ ಬದಲಾವಣೆ ತರಲಾಗಿದೆ. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ, ನಂತರ ಸಾಲ ಪಡೆಯಬೇಕು. ಈ ಅವ್ಯವಸ್ಥೆಯನ್ನು ದೂರ ಮಾಡದಿದ್ದರೆ ಆ ಬಗ್ಗೆಯೂ ಪ್ರತಿಭಟನೆ ನಡೆಸಲಾಗುತ್ತದೆ’ ಎಂದರು.
ದಿಶಾ ಸಮಿತಿ ಸದಸ್ಯ ಉಮೇಶ ಭಾಗ್ವತ ಮಾತನಾಡಿ `ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ತಾಲೂಕಿಗೆ 1176 ಮನೆಗಳು ಮಂಜೂರಿಯಾಗಿವೆ. ಅರ್ಹ ಫಲಾನುಭವಿಗಳ ಸರ್ವೆ ನಡೆಸಿ, ಅವರಿಗೆ ಮನೆ ಮಂಜೂರಾಗುವoತೆ ಮಾಡಲಾಗುತ್ತದೆ’ ಎಂದರು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ `ಪ.ಪಂ ವ್ಯಾಪ್ತಿಯಲ್ಲಿ ಜಿ+2 ಯೋಜನೆಯಡಿ 500ಕ್ಕೂ ಹೆಚ್ಚು ಮನೆ ನಿರ್ಮಾಣವಾಗಿದೆ. ಅವರಿಂದ ತಲಾ 50 ಸಾವಿರ ಹಣ ಪಡೆದಿದ್ದರೂ ಮನೆ ಹಂಚಿಕೆ ನಡೆದಿಲ್ಲ. ಯಲ್ಲಾಪುರ ಗ್ರಾಮದೇವಿ ಜಾತ್ರೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಪ ಪಂ ಕಾಂಗ್ರೆಸ್ ಸದಸ್ಯರೇ ಧ್ವನಿ ಎತ್ತಿದ್ದು, ಹದಗೆಟ್ಟಿರುವ ಪಟ್ಟಣ ಪಂಚಾಯಿತಿ ದುರಾಡಳಿತದ ವಿರುದ್ಧ ಶಾಸಕರು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ವಿಠ್ಠು ಶೆಳಕೆ, ಶ್ರೀಕಾಂತ ಹೆಬ್ಬಾರ, ಕೆ ಟಿ ಹೆಗಡೆ, ರವಿ ದೇವಡಿಗ, ಗುರು ಭಟ್ಟ ಜಂಬೆಸಾಲ, ರಜತ ಬದ್ದಿ ಇತರರಿದ್ದರು.