ಯಲ್ಲಾಪುರ, ಅಂಕೋಲಾ, ಶಿರಸಿ, ಮುರುಡೇಶ್ವರ ಹಾಗೂ ಸಿದ್ದಾಪುರ ಜೂಜಾಡುವವರ ವಿರುದ್ಧ ಪೊಲೀಸರು ಪದೇ ಪದೇ ಪ್ರಕರಣ ದಾಖಲಿಸುತ್ತಿದ್ದಾರೆ. ಅದಾಗಿಯೂ ಬಡವರ ಮನೆ ಹಾಳು ಮಾಡುವ ಅಕ್ರಮ ಆಟಕ್ಕೆ ಕಡಿವಾಣ ಬಿದ್ದಿಲ್ಲ.
ಮಾರ್ಚ 19ರ ರಾತ್ರಿ ಯಲ್ಲಾಪುರ – ಮಂಚಿಕೇರಿ ರಸ್ತೆಯ ಬೇಡ್ತಿ ಸೇತುವೆ ಅಡಿಭಾಗ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಪಿಎಸ್‌ಐ ಸಿದ್ದಪ್ಪ ಗುಡಿ ಅವರ ತಂಡಕ್ಕೆ ನಾಲ್ಕು ಜನ ಸಿಕ್ಕಿ ಬಿದ್ದಿದ್ದು, ಉಳಿದವರು ಕಾಡಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ. ದಾಳಿಯಲ್ಲಿ ತಟಗಾರ ಕ್ರಾಸಿನ ಮೀನು ಮಾರಾಟಗಾರ ಮಂಜುನಾಥ ರಾವ್, ಮಂಜುನಾಥ ನಗರದ ಆಚಾರಿ ಮಂಜುನಾಥ ನಾಯ್ಕ, ಸಬಗೇರಿಯ ಚಾಲಕ ಮಹಮದ್ ರಫಿಕ್, ನೂತನನಗರದ ಉದ್ಯೋಗಿ ಪ್ರಶಾಂತ ರಾವೋಜಿ ಪೊಲೀಸರಿಗೆ ಶರಣಾಗಿದ್ದಾರೆ.
ಪೊಲೀಸರನ್ನು ಕಂಡ ತೆಲಂಗಾರದ ಚಾಲಕ ವಿದ್ಯಾದರ ಬಾಂದೇಕರ್, ವಜ್ರಳ್ಳಿಯ ಚಾಲಕ ಜಿಕ್ರಾಯಾ ಮುಲ್ಲಾ, ಕಾಳಮ್ಮನಗರದ ಯಾಸಿನ್ ಶೇಖ್, ತಟಗಾರ ಕ್ರಾಸಿನ ಸುನೀಲ ಯಲ್ಲಾಪುರಕರ್ ಓಡಿ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದವರ ಬಳಿಯಿದ್ದ 19260ರೂ ಹಣ, ಇಸ್ಪಿಟ್ ಎಲೆ, 20ಸಾವಿರ ರೂ ಮೌಲ್ಯದ ನಾಲ್ಕು ಮೊಬೈಲ್ ಹಾಗೂ ಒಟ್ಟು 1.55 ಲಕ್ಷ ರೂ ಮೌಲ್ಯದ ನಾಲ್ಕು ಬೈಕುಗಳನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದ್ದಾರೆ.
ಸಿದ್ದಾಪುರದಲ್ಲಿ ಸಿಕ್ಕಿಬಿದ್ದ 13 ಎಲೆಮಾನವರು!
ಸಿದ್ದಾಪುರದ ಸವಲಗದ್ದೆ ಬಸ್ ನಿಲ್ದಾಣದ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪಿಎಸ್‌ಐ ಅನೀಲ ಮಾದರ್ ದಾಳಿ ಮಾಡಿದ್ದಾರೆ. ಈ ವೇಳೆ 13 ಜನ ಜೂಜಾಟಗಾರರು ಸಿಕ್ಕಿಬಿದ್ದಿದ್ದಾರೆ. 9200ರೂ ಹಣದೊಂದಿಗೆ ವಿವಿಧ ಪರಿಕ್ಕರಗಳನ್ನು ಅವರು ವಶಕ್ಕೆಪಡೆದಿದ್ದಾರೆ. ಇಟಗಿಯ ಇಸ್ಮಾಯಲ್ ಸಾಬ್, ವಂದಾನೆಯ ಮಹೇಶ ಗೌಡ, ದೊಡ್ಮನೆ ಚುಂಗಳಮಕ್ಕಿಯ ತಿಮ್ಮಪ್ಪ ನಾಯ್ಕ, ಸುರಗಾಲದ ಗಜಾನನ ನಾಯ್ಕ, ಬಿಳಗಿ ಕಟ್ಟಿಕೈನ ಮರಿಯಾ ಗೌಡ, ವಂದಾನೆ ಕಬಗಾರದ ಮಂಜುನಾಥ ಗೌಡ, ದೊಡ್ಮನೆ ನೆರಗೋಡಿನ ರಾಮಾ ಮರಾಠಿ, ಹೊನ್ನಾವರದ ಹಳಕೇರಿಯ ಸುಬ್ರಹ್ಮಣ್ಯ ಅಂಬಿಗ, ಸಿದ್ದಾಪುರ ಹಸ್ವಿಗೊಳಿಯ ತಿಮ್ಮಪ್ಪ ನಾಯ್ಕ, ದೊಡ್ಮನೆ ಗುಡ್ಡುಡುಗುಡ್ಡಿಯ ಮಂಜುನಾಥ ಗೌಡ, ದೊಡ್ಮನೆ ಇಸನಗುಳಿಯ ಧ್ಯಾವರು ಗೌಡ, ಸುರಗಾಲದ ರಾಜೇಶ ನಾಯ್ಕ ಹಾಗೂ ನರಗೋಡಿನ ರಾಜು ಮರಾಠಿ ಸಿಕ್ಕಿಬಿದ್ದವರು. ಈ ಎಲ್ಲರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಅಂಕೋಲಾದಲ್ಲಿ ಮಿಂಚಿನ ಕಾರ್ಯಾಚರಣೆ:
ಅಂಕೋಲಾ ಪಿಎಸ್‌ಐ ಮಂಜೇಶ್ವರ ಚಂದಾವರ ಅವರು ಮಟ್ಕಾ ಆಡಿಸುವವರನ್ನು ಹುಡುಕಿ ಹುಡುಕಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿದ್ದಾರೆ. ಒಂದೇ ದಿನ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಅವರು ಹಿಡಿದಿದ್ದಾರೆ. ಅಂಕೋಲಾ ಗಾಂವ್ಕರವಾಡದ ಕೇಣಿಯಲ್ಲಿ ವ್ಯವಹಾರ ಮಾಡಿಕೊಂಡಿರುವ ವಿಠ್ಠಲ ನಾಯ್ಕ ಬಸ್ ನಿಲ್ದಾಣದ ಎದುರಿನ ಗೂಡಂಗಡಿಯಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದರು. ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಗ್ರಹಿಸಿ ಅದನ್ನು ಮಟ್ಕಾ ಬುಕ್ಕಿಯಾದ ಬೆಳಂಬಾರದ ಮಂಜುನಾಥ ನಾಯ್ಕರಿಗೆ ಕೊಡುತ್ತಿದ್ದರು. ಪೊಲೀಸರು ದಾಳಿ ನಡೆಸಿದಾಗ 1300ರೂ ಹಣ ಹಾಗೂ ಓಸಿ ಆಟದ ಸಾಮಗ್ರಿಗಳು ದೊರೆತವು. ಅದಾದ ನಂತರ ಅಂಕೋಲಾದ ಶ್ರೀ ಸ್ಟೂಡಿಯೋ ಬಳಿ ಅವರು ದಾಳಿ ಮಾಡಿದರು. ಅಲ್ಲಿ ಬೊಬ್ರುವಾಡದ ಪ್ರವೀಣ ಶೆಟ್ಟಿ 1 ರೂಪಾಯಿಗೆ 80ರೂ ಕೊಡುವುದಾಗಿ ಹೇಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ಅಕ್ರಮವಾಗಿ ಸಂಗ್ರಹಿಸಿದ 970ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದಾಗ, ಪ್ರವೀಣ ಶೆಟ್ಟಿ ಸಹ ಮಟ್ಕಾ ಬುಕ್ಕಿ ಮಂಜುನಾಥ ನಾಯ್ಕರ ಹೆಸರು ಬಾಯ್ಬಿಟ್ಟರು.
ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಅಂಕೋಲಾದ ಫೀಡ್‌ಜೋನ್ ಪಾಸ್ಟ್ಫುಡ್ ಅಂಗಡಿ ಬಳಿ ತೆರಳಿದರು. ಅಲ್ಲಿ ಬೆಳಂಬಾರ ಐಟಿಐ ಕಾಲೇಜು ಬಳಿಯ ದುರ್ಗಾ ನಾಯ್ಕ ಮಟ್ಕಾ ಆಡಿಸುತ್ತಿರುವುದನ್ನು ಪತ್ತೆ ಮಾಡಿದರು. ದುರ್ಗಾ ನಾಯ್ಕ ಬಳಿಯಿದ್ದ 1 ಸಾವಿರ ರೂ ಹಣ ವಶಕ್ಕೆ ಪಡೆದಿದ್ದು, ಅಲ್ಲಿ ಸಹ ಮಟ್ಕಾ ಬುಕ್ಕಿ ಮಂಜುನಾಥ ನಾಯ್ಕರ ಹೆಸರು ಮುನ್ನಲೆಗೆ ಬಂದಿತು. ಈ ಹಿನ್ನಲೆ ಮಟ್ಕಾ ಆಡಿಸುತ್ತಿದ್ದ ಈ ಮೂವರ ಜೊತೆ ಮಟ್ಕಾ ಬುಕ್ಕಿ ಮಂಜುನಾಥ ನಾಯ್ಕರ ಹೆಸರನ್ನು ಸೇರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.
ಈ ಶಿಲ್ಪಿಗೆ ಜೂಜಾಟ ಪಾರ್ಟ ಟೈಂ ಕೆಲಸ!
ಮುರುಡೇಶ್ವರದಲ್ಲಿ ಮಟ್ಕಾ ಆಡಿಸುತ್ತಿದ್ದ ಮೋಹನ ನಾಯ್ಕ ಮೇಲೆ ಪಿಎಸ್‌ಐ ಹಣುಮಂತ ಬೀರಾದರ್ ದಾಳಿ ಮಾಡಿದರು. ಮಾವಳ್ಳಿ-2 ಬಳಿಯ ಕುಡಸೋಳ ಬೈರಪ್ಪನಮನೆಯ ಮೋಹನ ನಾಯ್ಕ ಶಿಲ್ಪಿಯಾಗಿದ್ದು, ಬಿಡುವಿನ ವೇಳೆ ಮಟ್ಕಾ ಆಡಿಸಿ ಹಣ ಸಂಪಾದಿಸುತ್ತಿದ್ದರು. ಮಾರ್ಚ 19ರಂದು ಮುರುಡೇಶ್ವರದ ಬಸ್ತಿ ದೇವಿಕಾನ್ ರಸ್ತೆ ರೈಲ್ವೆ ಸೇತುವೆ ಬಳಿ ಮಟ್ಕಾ ಸಂಖ್ಯೆ ಬರೆಯುತ್ತಿರುವಾಗ ಮೋಹನ ನಾಯ್ಕ ಸಿಕ್ಕಿ ಬಿದ್ದರು. 620ರೂ ಹಣದೊಂದಿಗೆ ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದರು.
ಕೂಲಿ ಕಾರ್ಮಿಕರಿಗೆ ಕಾಸು ಮಾಡುವ ಆಸೆ:
ಶಿರಸಿಯಲ್ಲಿ ಜೂಜಾಟ ನಡೆಸಿ ಅನ್ಯಾಯ ಮಾರ್ಗದಿಂದ ಕಾಸು ಸಂಪಾದಿಸುತ್ತಿದ್ದ ಮಂಜಳ್ಳಿಯ ಪೇಂಟರ್ ವಿನಯ ನಾಯ್ಕ ಹಾಗೂ ಕಸ್ತುರಿಬಾನಗರ ಸೋನಿಯಾಗಲ್ಲಿಯ ಗೌಂಡಿ ಸಯ್ಯದ್ ರಫಿಕ್ ರಚವಿ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.
ಮಾರ್ಚ 17ರಂದು ಕದಂಬ ಸರ್ಕಲ್ ಬಳಿ ನಿಂತು ಮಟ್ಕಾ ಬರೆಯುತ್ತಿದ್ದಾಗ ವಿನಯ ನಾಯ್ಕ ಅವರು ಪಿಎಸ್‌ಐ ನಾಗಪ್ಪ ಬಿ ಅವರ ಬಳಿ ಸಿಕ್ಕಿ ಬಿದ್ದರು. 1200ರೂ ಹಣವನ್ನು ವಶಕ್ಕೆಪಡೆದ ಪೊಲೀಸರು ಮಟ್ಕಾ ಪರಿಕ್ಕರ ಸಂಗ್ರಹಿಸಿ ಪ್ರಕರಣ ದಾಖಲಿಸಿದರು. ಮಾರ್ಚ 18ರಂದು ಶಿರಸಿ ಗುರುನಗರದ ಯೋಗ ಮಂದಿರದ ಬಳಿ 1ರೂಪಾಯಿಗೆ 80 ರೂ ಕೊಡುವುದಾಗಿ ಕೈ ಸನ್ನೆ ಮಾಡುತ್ತಿದ್ದ ಸಯ್ಯದ್ ರಫಿಕ್ ಪಿಎಸ್‌ಐ ರತ್ನಾ ಕುರಿ ಅವರ ಕಣ್ಣಿಗೆ ಬಿದ್ದರು. 820ರೂ ಹಣ ಹಾಗೂ ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದು ಪೊಲೀಸರು ಪ್ರಕರಣ ದಾಖಲಿಸಿದರು.