ಕುಮಟಾದ ಅಳ್ವೆಕೋಡಿ ಮೀನು ಮಾರುಕಟ್ಟೆ ತಿರುವನಿಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಕಲಭಾಗ ಗ್ರಾಮ ಪಂಚಾಯತ ತೆರವು ಮಾಡಿದೆ. ಬುಧವಾರ ರಾತ್ರಿಯಾದರೂ ತ್ಯಾಜ್ಯ ಆರಿಸುವ ಕೆಲಸ ಮುಗಿಯದ ಕಾರಣ ಗ್ರಾ ಪಂ ಸಿಬ್ಬಂದಿ ಬ್ಯಾಟರಿ ಬೆಳಕಿನಲ್ಲಿ ರಸ್ತೆ ಅಂಚಿನ ಪ್ರದೇಶ ಸ್ವಚ್ಛ ಮಾಡಿದ್ದಾರೆ.
ಮಾರ್ಚ 16ರಂದು ಎಲ್ಲೆಂದರಲ್ಲಿ ತ್ಯಾಜ್ಯ ಬಿದ್ದಿರುವ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ದೂರಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಹೊನ್ಮಾವ ಮತ್ತು ಅಳ್ವೆಕೋಡಿ ಮೀನು ಮಾರುಕಟ್ಟೆ ತಿರುವಿನ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇದನ್ನು ಕಲಭಾಗದ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪ್ರಜ್ಞಾ ನಾಯ್ಕ ಅವರು ಗಂಭಿರವಾಗಿ ಪರಿಗಣಿಸಿದರು.
ಗ್ರಾಮದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಜೊತೆ ರಸ್ತೆ ಅಂಚಿನ ತ್ಯಾಜ್ಯ ಆರಿಸಿದರು. ಅಲ್ಲಿದ್ದ ತ್ಯಾಜ್ಯಗಳನ್ನು ತೆರವು ಮಾಡಲು ನಿರಂತರವಾಗಿ ಮೂರು ದಿನಗಳ ಕಾಲ ಗ್ರಾ ಪಂ ಶ್ರಮಿಸಿತು. ಶ್ರಮದಾನದ ವೇಳೆಯಲ್ಲಿಯೇ ಕೆಲವರು ತ್ಯಾಜ್ಯ ಎಸೆಯುತ್ತಿದ್ದು, ಗ್ರಾ ಪಂ ಸಿಬ್ಬಂದಿ ಅವರನ್ನು ತಡೆದು ಎಚ್ಚರಿಕೆ ನೀಡಿದರು.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಿದ ಪಿಡಿಓ ಪ್ರಜ್ಞಾ ನಾಯ್ಕ ಅವರು `ಸಿಸಿ ಕ್ಯಾಮರಾ ಅಳವಡಿಸಿ ಕಸ ಎಸೆಯುವವರನ್ನು ಪತ್ತೆ ಮಾಡಲು ನಿರ್ಧರಿಸಲಾಗಿದೆ. ಸಿಕ್ಕಿಬಿದ್ದವರ ವಿರುದ್ಧ ಪೊಲೀಸ್ ದೂರು ನೀಡಲಾಗುತ್ತದೆ. ಸಿಸಿ ಕ್ಯಾಮರಾ ಖರೀದಿಗೂ ಅನುಮೋದನೆ ಪಡೆಯಲಾಗಿದೆ’ ಎಂದು ತಿಳಿಸಿದರು.





